ಕೋಲಾರ: ರಾಜಸ್ತಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಲ್ಲಿ ಸಿಂಹಸ್ವಪ್ನವಾಗಿರುವ ಮಿಡತೆಗಳು ರಾಜ್ಯಕ್ಕೂ ಕಾಲಿಟ್ಟಿವೆ. ಇದರಿಂದಾಗಿ ರೈತರು ಆತಂಕಗೊಂಡಿದ್ದಾರೆ.
ಮಿಡತೆಗಳು ರಾಜ್ಯ ಪ್ರವೇಶಿಸದಂತೆ ತಡೆಯುವುದು ಹೇಗೆಂದು ರಾಜ್ಯ ಸರ್ಕಾರ ಯೋಚಿಸುತ್ತಿರುವಾಗಲೇ ರಾಶಿ ರಾಶಿ ಮಿಡತೆಗಳು ಕೋಲಾರಕ್ಕೆ ಧಾಂಗುಡಿಯಿಟ್ಟಿವೆ.
ನೆರೆಯ ಆಂಧ್ರದಿಂದ ಧಾಂಗುಡಿಯಿಟ್ಟಿರುವ ದೈತ್ಯ ಮಿಡತೆಗಳು ಕೋಲಾರ ತಾಲ್ಲೂಕಿನ ಬಿಂಬ ಮತ್ತು ದೊಡ್ಡಹಸಾಳ ಗ್ರಾಮಗಳಲ್ಲಿ ಕಾಣಿಸಿಕೊಂಡಿವೆ. ರಾತ್ರೋರಾತ್ರಿ ಸಾವಿರಾರು ಮಿಡತೆಗಳು ಗ್ರಾಮಗಳ ಹೊರವಲಯದಲ್ಲಿ ಕಾಣಿಸಿಕೊಂಡಿದ್ದು ಸುತ್ತಮುತ್ತಲಿನ ಗಿಡ-ಮರಗಳು ಹಾಗೂ ವಿದ್ಯುತ್ ಕಂಬಗಳ ಮೇಲೆ ಆಶ್ರಯ ಪಡೆದಿವೆ.
ಯಾವುದೇ ಸಂದರ್ಭದಲ್ಲಿ ತೋಟಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬಿಂಬ ಮತ್ತು ದೊಡ್ಡಹಸಾಳ ಗ್ರಾಮದ ಯುವಕರು ಮಿಡತೆಗಳಿರುವ ಗಿಡ-ಮರಗಳನ್ನು ಸುಟ್ಟುಹಾಕುತ್ತಿದ್ದಾರೆ.
ಕೋಲಾರವಲ್ಲದೆ ಚಿಕ್ಕಬಳ್ಳಾಪುರ ಹಾಗೂ ರಾಜಧಾನಿ ಬೆಂಗಳೂರಿಗೂ ದೈತ್ಯ ಮಿಡತೆಗಳು ಧಾಂಗುಡಿಯಿಡುವ ಸಾಧ್ಯತೆಗಳಿವೆ. ಈಗಾಗಲೇ ಗುಡಿಬಂಡೆ, ಕೈವಾರ ಮತ್ತಿತರ ಪ್ರದೇಶಗಳಲ್ಲಿ ಮಿಡತೆ ಹಾವಳಿ ಮಿತಿಮೀರಿದ್ದು, ಯಲಹಂಕದ ಮೂಲಕ ರಾಜಧಾನಿ ಮೇಲೂ ಮಿಡತೆ ಸೈನ್ಯ ದಾಳಿ ಇಡುವ ಸಾಧ್ಯತೆಗಳಿವೆ.