newsics.com
ಬೆಂಗಳೂರು: ರಾಜ್ಯದ ಹಲವೆಡೆ ಮುಂಗಾರು ಮಳೆ ಅಬ್ಬರ ಜೋರಾಗಿದ್ದು, ನದಿಗಳು ತುಂಬಿ ಹರಿಯುತ್ತಿವೆ.
ಕೊಡಗು, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಗಾಳಿ ಮಳೆಯಿಂದಾಗಿ ವಿದ್ಯುತ್ ಕಂಬಗಳು, ಮರಗಳು ನೆಲಕ್ಕುರುಳಿದ್ದು, ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.
ನೆಟ್ವರ್ಕ್ ಗೋಳು:
ವಿದ್ಯುತ್ ವ್ಯತ್ಯಯದಿಂದಾಗಿ ಆನ್’ಲೈನ್ ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳು, ವರ್ಕ್ ಫ್ರಂ ಹೋಮ್ ಉದ್ಯೋಗಿಗಳು ನೆಟ್ ವರ್ಕ್ ಇಲ್ಲದೆ ಪರದಾಡುತ್ತಿದ್ದಾರೆ. ನೆಟ್ವರ್ಕ್ ಇರಲಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದರೆ ಸುಳ್ಳು ಹೇಳುತ್ತಿದ್ದೀರಿ ಎಂದು ಬೋಧಕರು ವಿದ್ಯಾರ್ಥಿಗಳನ್ನೇ ದಬಾಯಿಸುತ್ತಿದ್ದಾರೆ. ಹಾಜರಾತಿ ನೀಡುವುದಿಲ್ಲ, ಆಂತರಿಕ ಅಂಕ ಕಡಿತ ಮಾಡುವುದಾಗಿ ಬೆದರಿಸುತ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ.
ಚಿಕ್ಕಮಗಳೂರು ತತ್ತರ:
ಇನ್ನು, ವರುಣನ ಅಬ್ಬರಕ್ಕೆ ಚಿಕ್ಕಮಗಳೂರು ಜಿಲ್ಲೆಯ ಜನ ತತ್ತರಿಸಿದ್ದಾರೆ. ಮೂಡಿಗೆರೆ, ಕೊಟ್ಟಿಗೆಹಾರ, ಕುದುರೆಮುಖ, ಕೊಪ್ಪ ಸುತ್ತ ಭಾರೀ ಗಾಳಿಸಹಿತ ಮಳೆ ಸುರಿಯುತ್ತಿದ್ದು, ಹಲವೆಡೆ ಮೂರು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ವಾಹನ ಸಂಚಾರವೂ ಸ್ಥಗಿತಗೊಂಡಿದೆ.
ಮೈದುಂಬಿದ ನದಿಗಳು:
ಭದ್ರಾ ನದಿ, ಹೇಮಾವತಿ, ವರದಾ, ಅಘನಾಶಿನಿ ನದಿಗಳು ಮೈದುಂಬಿ ಹರಿಯುತ್ತಿವೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಸುರಿಯುತ್ತಿದ್ದು, ಕಾವೇರಿ ನದಿಯ ನೀರಿನ ಮಟ್ಟದಲ್ಲೂ ಏರಿಕೆಯಾಗಿದೆ. ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ಮಂಗಳವಾರ 1,228 ಕ್ಯುಸೆಕ್ ಒಳಹರಿವು ದಾಖಲಾಗಿತ್ತು. ಬುಧವಾರ 6,379 ಕ್ಯುಸೆಕ್ ಒಳಹರಿವು ದಾಖಲಾಗಿದೆ. ಗರಿಷ್ಠ 124.80 ಅಡಿ ಎತ್ತರದ ಜಲಾಶಯದಲ್ಲಿ ಪ್ರಸ್ತುತ 82.50 ಅಡಿ ನೀರಿನ ಸಂಗ್ರಹವಿದೆ. ಹೊರಹರಿವು 361 ಕ್ಯುಸೆಕ್ ನಷ್ಟಿದೆ.
ಕೊಡಗು ಜಿಲ್ಲೆಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.
ಮಡಿಕೇರಿ ಸೇರಿದಂತೆ ಕೊಡಗಿನ ಹಲವೆಡೆ ತೀವ್ರ ಚಳಿಯ ವಾತಾವರಣವಿದೆ.
ವೆಬ್ ಸಿರೀಸ್’ಗೆಂದು ಚಿತ್ರೀಕರಣ: ಪೋರ್ನ್ ಸೈಟ್’ನಲ್ಲಿ ರಿಲೀಸ್, ದೂರು ನೀಡಿದ ಮಾಡೆಲ್
ರೈಲು ಹತ್ತಲು ಪ್ಲಾಟ್‌ಫಾರ್ಮ್ ಟಿಕೆಟ್ ಅಷ್ಟೇ ಸಾಕು! ರೈಲಲ್ಲೇ ಟಿಕೆಟ್ ಸಿಗತ್ತೆ
ಕಾಲು ಬಾಯಿ ರೋಗ: ಸರ್ಕಾರದ ನಿರ್ಲಕ್ಷ್ಯದಿಂದ ಜಾನುವಾರುಗಳಿಗೂ ಸಿಗದ ಲಸಿಕೆ