newsics.com
ಬೆಳಗಾವಿ: ಭಾರಿ ಮಳೆಗೆ ಮನೆ ಕುಸಿದು ಒಂದೇ ಕುಟುಂಬದ ಏಳು ಮಂದಿ ಸಾವನ್ನಪ್ಪಿದ್ದಾರೆ.
ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಇಂದು ಸಂಜೆ ಸುರಿದ ಮಳೆಗೆ ಮನೆ ಕುಸಿದಿದೆ. ಮನೆಯಲ್ಲಿದ್ದ ಐವರು ಸಾವಿಗೀಡಾಗಿದ್ದು, ಅವಶೇಷಗಳಡಿ ಸಿಲುಕಿದ್ದ ಮೂವರನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಈ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ.
ಅರ್ಜುನ ಹನುಮಂತ ಖನಗಾಂವಿ(58), ಗಂಗವ್ವ ಭೀಮಪ್ಪ ಖನಗಾಂವಿ(50), ಸತ್ಯವ್ವ ಅರ್ಜುನ ಖನಗಾಂವಿ(45), ಸವಿತಾ ಭೀಮಪ್ಪ ಖನಗಾಂವಿ(28), ಲಕ್ಷ್ಮೀ ಅರ್ಜುನ ಖನಗಾಂವಿ(15) ಹಾಗೂ ಪೂಜಾ ಅರ್ಜುನ ಖನಗಾಂವಿ(8), ಕಾಶವ್ವ. ವಿಠ್ಠಲ ಕೊಳೆಪ್ಪನವರ(8) ಮೃತಪಟ್ಟಿದ್ದಾರೆ.
ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಬಡಾಲ ಅಂಕಲಗಿ ಗ್ರಾಮದ ಹಳೆಯ ಮನೆಯ ಚಾವಣಿ ಬಿಚ್ಚಿ ಹೊಸ ಚಾವಣಿ ಹಾಕುವ ಸಿದ್ಧತೆ ಮಾಡಲಾಗುತ್ತಿತ್ತು. ಪಕ್ಕದಲ್ಲಿಯೇ ಈ ಕುಟುಂಬ ತಗಡಿನ ಶೆಡ್ ಹಾಕಿ ವಾಸಿಸುತ್ತಿತ್ತು. ಆದರೆ ಭಾರೀ ಮಳೆ ಸುರಿಯುತ್ತಿರುವುದನ್ನು ಈ ಕುಟುಂಬದ ಸದಸ್ಯರು ನೋಡುತ್ತ ನಿಂತಿದ್ದರು. ಈ ವೇಳೆ ಹಳೆಯ ಗೋಡೆ ದಿಢೀರ್ ಕುಸಿದು ಬಿದ್ದಿದೆ. ಮೈಮೇಲೆ ಗೋಡೆ ಕುಸಿದು ಬಿದ್ದು ಎಲ್ಲರೂ ಮೃತಪಟ್ಟಿದ್ದಾರೆ.
ಖನಗಾಂವಿ ಕುಟುಂಬದ ಬಾಲಕಿ ಸೇರಿ ಆರು ಜನರು ಹಾಗೂ ಪಕ್ಕದ ಮನೆಯ ಎಂಟು ವರ್ಷದ ಬಾಲಕಿ ಸೇರಿ ಏಳು ಜನ ಮೃತಪಟ್ಟಿದ್ದಾರೆ. ಐವರು ಸ್ಥಳದಲ್ಲಿ ಮೃತಪಟ್ಟರೆ, ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವಾಗ ಸಾವಿಗೀಡಾಗಿದ್ದಾರೆ.