ಬೆಂಗಳೂರು: ಮಂಗಳವಾರ ರಾಜ್ಯಾದ್ಯಂತ ಗಾಳಿ, ಮಳೆ ಅಬ್ಬರ ಹೆಚ್ಚಿದ್ದು, ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಕರಾವಳಿ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿದೆ. ಉತ್ತರ ಕನ್ನಡ. ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಜೋರು ಮಳೆಗೆ ಜನ ಆತಂಕಗೊಂಡಿದ್ದಾರೆ. ಬೆಂಗಳೂರಿನ ಅಲ್ಲಲ್ಲಿ ಉತ್ತಮ ಮಳೆಯಾಗುತ್ತಿದೆ.
ರಾಜ್ಯಾದ್ಯಂತ ಮೋಡ ಕವಿದ ವಾತಾವರಣವಿದ್ದು, ಶೀತ ಗಾಳಿ ಬೀಸುತ್ತಿರುವುದರಿಂದ ರೋಗ ಭೀತಿ ಎದುರಾಗಿದೆ. ಕರಾವಳಿ ಸೇರಿದಂತೆ ಮಲೆನಾಡು, ಉತ್ತರ ಒಳನಾಡಿನಲ್ಲಿಯೂ ಮಳೆ ಹೆಚ್ಚಾಗಿದೆ. ಈಗಾಗಲೇ ಮಳೆಯಿಂದಾಗಿ ಕಂಗಾಲಾಗಿರುವ ಕರಾವಳಿ ಭಾಗದಲ್ಲಿ ಇನ್ನೂ ಎರಡು ಮೂರು ಒಂದು ವಾರಗಳ ಕಾಲ ಮಳೆ ಮುಂದುವರಿಯಲಿದ್ದು, ಹಲವೆಡೆ ಯಲ್ಲೊ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂಬೈ ಮಹಾನಗರದಲ್ಲಿ ಜಡಿಮಳೆ
ಶಿವಮೊಗ್ಗ, ಮಂಗಳೂರು, ಬೆಂಗಳೂರು, ಚಿಕ್ಕಮಗಳೂರು, ಕೋಲಾರ, ಮೈಸೂರು ಸೇರಿದಂತೆ ಹಲವೆಡೆ ಜೋರು ಮಳೆ ಸುರಿಯುತ್ತಿದೆ. ಜೋರು ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಂಗಳೂರಿನಲ್ಲೂ ಮಳೆ ಸುರಿಯುತ್ತಿದೆ. ನಗರದ ಹೊರವಲಯ ನೆಲಮಂಗಲ ನಗರ ಸೇರಿದಂತೆ ಸುಂಕದಕಟ್ಟೆ, ಬ್ಯಾಡರಹಳ್ಳಿ, ನಾಗರಬಾವಿ, ಬನಶಂಕರಿ, ಜಯನಗರ, ಮಲ್ಲೇಶ್ವರಂ, ಮೆಜೆಸ್ಟಿಕ್, ಕೆ.ಆರ್ ಮಾರ್ಕೆಟ್, ಕೆ.ಆರ್ ಪುರಂ, ಟೌನ್ಹಾಲ್ ಸೇರಿ ಹಲವೆಡೆ ಧಾರಾಕಾರ ಮಳೆಯಾಗಿದೆ. ಕೊಡಗಿನಲ್ಲಿ ವ್ಯಾಪಕ ಮಳೆ
ಕೊಡಗು ಜಿಲ್ಲೆಯಲ್ಲಿ ಆಶ್ಲೇಷ ಮಳೆಯ ಅಬ್ಬರ ಮುಂದುವರಿದಿದೆ. ಕಾವೇರಿ ಹಾಗೂ ಲಕ್ಷ್ಮಣತೀರ್ಥ ನದಿಗಳು ಜಿಲ್ಲೆಯಲ್ಲಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು ಪ್ರವಾಹ ಭೀತಿ ಎದುರಾಗಿದೆ. ಭಾಗಮಂಡಲ ತ್ರಿವೇಣಿ ಸಂಗಮ ಸಂಪೂರ್ಣ ಭರ್ತಿಯಾಗಿದೆ. ಭಾಗಮಂಡಲ- ಅಯ್ಯಂಗೇರಿ ರಸ್ತೆಯ ಮೇಲೆ ಕಾವೇರಿ ನೀರು ಹರಿಯುತ್ತಿದೆ. ಭಾಗಮಂಡಲ, ಚೇರಂಬಾಣೆ ಭಾಗದಲ್ಲಿ ಭತ್ತದ ಗದ್ದೆಗಳು ಜಲಾವೃತವಾಗಿವೆ. ಗೋಣಿಕೊಪ್ಪಲು ಸಮೀಪದ ಬಾಳೆಲೆಯ ಹಳೇ ಸೇತುವೆ ಮುಳುಗಡೆಯಾಗಿದೆ.
ಮಡಿಕೇರಿ, ಮಾದಾಪುರ, ಸೋಮವಾರಪೇಟೆ ಭಾಗದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಹಾರಂಗಿಗೆ ಭಾರಿ ಪ್ರಮಾಣದ ನೀರು ಹರಿದುಬರುತ್ತಿದೆ. ಹೆಬ್ಬೆಟ್ಟಗೇರಿ, ಕಾಲೂರು, ನಾಪೋಕ್ಲು ಭಾಗದಲ್ಲಿ ಗಾಳಿಗೆ ಮರಗಳು ಉರುಳಿವೆ. ಕೊಡಗಿನಲ್ಲಿ ಆ.7ರವರೆಗೂ ಭಾರಿ ಮಳೆಯಾಗುವ ಮುನ್ಸೂಚನೆಯಿದ್ದು, ಜನರು ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮನವಿ ಮಾಡಿದ್ದಾರೆ.