ನವದೆಹಲಿ: ದೇಶದ ಆದಾಯ ಮತ್ತು ಖರ್ಚು ಕುರಿತ ವಾರ್ಷಿಕ ಲೆಕ್ಕ ಪತ್ರ ಕೇಂದ್ರ ಬಜೆಟ್ ಶನಿವಾರ ಮಂಡನೆಯಾಗಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಎರಡನೇ ಬಾರಿಗೆ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ. ಕುಸಿದ ಆರ್ಥಿಕ ಪ್ರಗತಿ ದರ, ಮಧ್ಯ ಪ್ರಾಚ್ಯ ಬಿಕ್ಕಟ್ಟಿನ ಪ್ರಭಾವ ಹಾಗೂ ಜಾಗತಿಕ ಆರ್ಥಿಕ ಹಿನ್ನೆಡೆಯ ವಾತಾವರಣದಲ್ಲಿ ಅಭಿವೃದ್ದಿಗೆ ಒತ್ತು ಕೊಡುವ ಬಜೆಟ್ ಮಂಡನೆ ಸವಾಲಿನ ಕೆಲಸವಾಗಿದೆ. ದೇಶದಲ್ಲಿ ಖರೀದಿ ಶಕ್ತಿ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬೇಡಿಕೆ ಕುಸಿದಿರುವುದು ಸಂಪನ್ಮೂಲ ಸಂಗ್ರಹದ ಮೇಲೆ ಪರಿಣಾಮ ಬೀರಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳ ಸೃಷ್ಟಿ ಮೂಲಕ ಆರ್ಥಿಕ ಸಬಲೀಕರಣಕ್ಕೆ ದಾರಿ ಮಾಡಿ ಕೊಡಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆಗಳಿವೆ. ನಿರೀಕ್ಷೆಯಂತೆ ಸೇನಾ ಪಡೆಯ ಆಧುನೀಕರಣ ಮತ್ತು ಮೂಲ ಭೂತ ಸೌಲಭ್ಯ ಅಭಿವೃದ್ದಿಗೆ ಕೇಂದ್ರ ಮುಂಗಡ ಪತ್ರ ಆದ್ಯತೆ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಆದಾಯ ತೆರಿಗೆ ಸ್ಲಾಬ್ ನಲ್ಲಿ ಗಮನಾರ್ಹ ಬದಲಾವಣೆ ಸಾಧ್ಯತೆ ಕ್ಷೀಣಿಸಿದೆ.