newsics.com
ನವದೆಹಲಿ: ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ದೇಶದ ಕೆಲವು ಭಾಗಗಳಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಆರಂಭವಾಗಿರುವ ಸಾಧ್ಯತೆಯಿದೆ ಎಂದು ದೆಹಲಿಯ ಎಐಐಎಂಎಸ್ ನಿರ್ದೇಶಕ ಹಾಗೂ ಕೋವಿಡ್ ಟಾಸ್ಕಫೋರ್ಸ್ ಮುಖ್ಯಸ್ಥ ಡಾ. ರಣದೀಪ್ ಗುಲೇರಿಯಾ ಹೇಳಿದ್ದಾರೆ.
ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳ, ಸೋಂಕು ಹರಡುವ ತೀವ್ರತೆಯನ್ನು ಗಮನಿಸಿದರೆ ಈ ಶಂಕೆ ಮೂಡುತ್ತಿದೆ. ದೇಶದ ಕೆಲವೆಡೆ ಕೊರೋನಾ ಸೋಂಕಿನ ಬಗ್ಗೆ ಜನರು ನಿರ್ಲಕ್ಷ್ಯದ ಭಾವನೆ ತೋರುವಂತಾಗಿದೆ. ಸುರಕ್ಷತಾ ಕ್ರಮಗಳಿಂದ ಜನರು ಬೇಸತ್ತಿದ್ದಾರೆ. ದೆಹಲಿಯಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸದ ಜನ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸುತ್ತಿದ್ದಾರೆ ಮತ್ತು ಸುರಕ್ಷಿತ ಅಂತರದ ನಿಯಮ ಮರೆತು ಗುಂಪುಗೂಡುವಿಕೆ ಹೆಚ್ಚುತ್ತಿದೆ. ಕೊರೋನಾ ಸೋಂಕಿನ ಪ್ರಮಾಣ ದಿಢೀರ್ ಹೆಚ್ಚಳವಾಗಲು ಇದು ಪ್ರಮುಖ ಕಾರಣವಾಗಿದೆ ಎಂದು ಡಾ. ರಣದೀಪ್ ಗುಲೇರಿಯಾ ಅಭಿಪ್ರಾಯಪಟ್ಟಿದ್ದಾರೆ.
ಕೊರೋನಾ ಸೋಂಕಿನ ಗ್ರಾಫ್ ಇಳಿಮುಖವಾಗುವ ಮುನ್ನ ಸೋಂಕಿನ ಪ್ರಮಾಣ ಗರಿಷ್ಟ ಮಟ್ಟಕ್ಕೆ ತಲುಪುತ್ತದೆ. ದೇಶದಲ್ಲೂ ಮುಂದಿನ ದಿನದಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆಯಿದ್ದರೂ, ಜನ ನಿರ್ಲಕ್ಷ್ಯ ತೋರಿ ಶಿಷ್ಟಾಚಾರ ಉಲ್ಲಂಘಿಸಿದರೆ ಕೊರೋನಾದ ಎರಡನೇ ಅಲೆ ಉಲ್ಬಣಿಸುವ ಸಾಧ್ಯತೆಯಿದೆ ಎಂದು ಗುಲೇರಿಯಾ ಎಚ್ಚರಿಸಿದ್ದಾರೆ.