ಬೆಂಗಳೂರು: ರಾಜ್ಯದಲ್ಲಿ ಮತ್ತೆ 28 ಮಂದಿಗೆ ಸೋಂಕು ತಗುಲಿದ್ದು, ಬೆಂಗಳೂರು ಹಾಗೂ ಮಂಗಳೂರಿನಲ್ಲಿ ತಲಾ ಒಬ್ಬರು ಕೊರೋನಾಗೆ ಬಲಿಯಾಗಿದ್ದಾರೆ.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 987ಕ್ಕೆ ಏರಿಕೆಯಾಗಿದೆ. ಸಾವನ್ನಪ್ಪಿರುವವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. 460 ಮಂದಿ ಗುಣಮುಖರಾಗಿದ್ದಾರೆ. ಬೀದರ್ 7, ಬೆಂಗಳೂರು 5, ಮಂಡ್ಯ 5, ಗದಗ 4, ದಾವಣಗೆರೆ 3, ಕಲಬುರಗಿ 2, ಬಾಗಲಕೋಟೆ 1 ಮತ್ತು ಬೆಳಗಾವಿಯಲ್ಲಿ 1 ಪ್ರಕರಣ ಪತ್ತೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ 80 ವರ್ಷದ ಮಹಿಳೆ ಸೋಂಕಿನಿಂದ ಮೃತಪಟ್ಟಿದ್ದಾರೆ. ಏ.26ರಂದು ಪಾರ್ಶ್ವವಾಯುವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರಲ್ಲಿ ಸೊಂಕು ಪತ್ತೆಯಾದ್ದರಿಂದ ಐಸಿಯುಗೆ ವರ್ಗಾಯಿಸಲಾಗಿತ್ತು. ಗುರುವಾರ ಬೆಳಗ್ಗೆ ಅವರು ಸೆಪ್ಟಿಕ್ ಶಾಕ್ ನಿಂದ ಮೃತಪಟ್ಟಿದ್ದಾರೆ.
ಆಂಧ್ರಪ್ರದೇಶದ ಅನಂತಪುರದ 60 ವರ್ಷದ ವೃದ್ಧ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ನ್ಯುಮೋನಿಯಾ ಮತ್ತು ಉಸಿರಾಟದ ಸಮಸ್ಯೆಯಿಂದ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಗುರುವಾರ ಮೃತಪಟ್ಟಿದ್ದಾರೆ. ಇವರು ಕಡಿಮೆ ರಕ್ತದ ಒತ್ತಡ ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.