newsics.com
ಕಾರವಾರ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯಲ್ಲಿ ಯುವತಿ ಹಾಗೂ ಮಹಿಳೆಯರ ನಾಪತ್ತೆ ಕೇಸ್‌ಗಳು ಗಣನೀಯವಾಗಿ ಹೆಚ್ಚಳವಾಗಿದೆ.
ಕಳೆದ 10 ತಿಂಗಳಿನಲ್ಲಿ 232 ಯುವತಿಯರು ಗಣನೀಯ ಪ್ರಮಾಣದಲ್ಲಿ ನಾಪತ್ತೆಯಾಗಿರುವುದು ಶಾಂತಿಯುತ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.
ಮಹಿಳೆಯರು ಅದರಲ್ಲೂ ಕಾಲೇಜು ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಕಣ್ಮರೆಯಾಗುತ್ತಿರುವುದು ಉತ್ತರ ಕನ್ನಡ ಜಿಲ್ಲೆಯ ಜನರಿಗೆ ತಲೆನೋವಾಗಿ ಪರಿಣಮಿಸಿದೆ.
ಗ್ರಾಮೀಣ ಭಾಗದಲ್ಲೇ ಅಧಿಕ ಕಣ್ಮರೆ ಪ್ರಕರಣಗಳು ನಡೆಯುತ್ತಿರುವುದು ಲವ್ ಜಿಹಾದ್ ಗುಮಾನಿಯನ್ನು ಹೆಚ್ಚಿಸಿದೆ.
2019ರಲ್ಲಿ 257 ನಾಪತ್ತೆ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 236 ಪ್ರಕರಣಗಳಲ್ಲಿ ನಾಪತ್ತೆಯಾದವರನ್ನು ಪೊಲೀಸರು ಹುಡುಕಿದ್ದರೆ, 21 ಇನ್ನೂ ತನಿಖೆಯಲ್ಲಿದ್ದವು. 2020ರ ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ 212 ನಾಪತ್ತೆ ಪ್ರಕರಣ ದಾಖಲಾಗಿ 197 ಮಂದಿ ಪತ್ತೆಯಾಗಿದ್ದಾರೆ. 15 ಮಂದಿಗಾಗಿ ಇನ್ನೂ ಹುಡುಕಾಟ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ದಾಖಲಾದ ನಾಪತ್ತೆ ಪ್ರಕರಣಗಳಲ್ಲಿ ಬಹುತೇಕ ಕೇಸ್‌ಗಳು ಪ್ರೀತಿ – ಪ್ರೇಮ, ಅನೈತಿಕ ಸಂಬಂಧಗಳಿಂದ ಮನೆ ಬಿಟ್ಟು ಹೋದವರಾಗಿದ್ದಾರೆ. ಕೆಲವು ಪ್ರಕರಣಗಳಲ್ಲಿ ಅಪಹರಣದ ಶಂಕೆ ಇದೆ ಎಂದು ತಿಳಿದುಬಂದಿದೆ.
ಈ ರೀತಿ ವಿವಾಹಿತ ಮಹಿಳೆಯರು, ಶಾಲಾ – ಕಾಲೇಜು ಯುವತಿಯರು ನಾಪತ್ತೆ ಹೆಚ್ಚಾಗಿರುವುದಕ್ಕೆ ಸಾಮಾಜಿಕ ಜಾಲತಾಣಗಳೂ ಹೆಚ್ಚಿನ ಪ್ರಮಾಣದಲ್ಲಿ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.
ಲವ್ ಜಿಹಾದ್‌ನಂತಹ ಪ್ರಕರಣಗಳು ಕೂಡ ಶಿರಸಿ, ಸಿದ್ದಾಪುರ ತಾಲೂಕಿನಲ್ಲಿ ದಾಖಲಾಗುತ್ತಿರುವುದು ಹೆಣ್ಣುಮಕ್ಕಳಿರುವ ಕುಟುಂಬವನ್ನು ಆತಂಕಕ್ಕೀಡುಮಾಡಿದೆ. ಲವ್ ಜಿಹಾದ್ ಆರೋಪಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರ ನಾಪತ್ತೆ ಪ್ರಕರಣಗಳನ್ನು ರಾಜ್ಯ ಸರ್ಕಾರ ಹಾಗೂ ಉತ್ತರ ಕನ್ನಡ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕಾಗಿದೆ.