♦ ಸೌದಿಯಲ್ಲಿ ಭಾರತೀಯರ ಬವಣೆ
ಹೊಟ್ಟೆಪಾಡಿಗೆ ಭಿಕ್ಷಾಟನೆ ಮಾಡಿ ಸೌದಿ ಜೈಲುಗಳಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರುವ ಕಾರ್ಯ ಆರಂಭವಾಗಬೇಕಿದೆ. 450 ಕಾರ್ಮಿಕರು ಜೈಲುಗಳಲ್ಲಿ ಸಿಲುಕಿದ್ದರೆ, ಇನ್ನೂ ಲಕ್ಷಾಂತರ ಕಾರ್ಮಿಕರು ತವರಿಗೆ ವಾಪಸಾಗಲು ಕಾದಿದ್ದಾರೆ.
newsics.com
‘ಕೆ ಲಸ ಮಾಡಲು ಸಿದ್ಧ’ ಎನ್ನುವವರನ್ನು ಕೈಬೀಸಿ ಕರೆದಿದ್ದ ರಾಷ್ಟ್ರ ಸೌದಿ ಅರೇಬಿಯಾ. ಮನೆಕೆಲಸ, ನರ್ಸಿಂಗ್, ಟೀಚಿಂಗ್‍ನಂತಹ ಕೆಲಸಗಳು, ಅಷ್ಟೇ ಏಕೆ? ಮರಳುಗಾಡಿನ ಖರ್ಜೂರದ ಫ್ಯಾಕ್ಟರಿಗಳಲ್ಲಿ ಚಿಕ್ಕಪುಟ್ಟ ಕೆಲಸಕ್ಕೂ ಭಾರತದಿಂದ ಸೌದಿಗೆ ಹೋದವರು ಅಸಂಖ್ಯ. ಸಾಲ ಮಾಡಿಕೊಂಡಾದರೂ ಸೌದಿಯ ವೀಸಾ ಗಿಟ್ಟಿಸಿ ತಮ್ಮ ಕುಟುಂಬದ ಬಡತನಕ್ಕೆ ಇನ್ನು ಅಂತ್ಯ ದೊರೆಯಿತು ಎಂದು ನಿಟ್ಟುಸಿರುಬಿಟ್ಟವರು ಅದೆಷ್ಟೋ ಮಂದಿ.
ಕನಸುಗಳನ್ನು ಹೊತ್ತು ಸೌದಿಗೆ ಹೋದವರಿಗೆ ಈಗ ಅದೇ ಕನಸಿನ ರಾಷ್ಟ್ರದಲ್ಲಿ ಬದುಕಲು ಸಾಧ್ಯವಾಗದ ವಾತಾವರಣ ನಿರ್ಮಾಣವಾಗಿದೆ. ಕೊರೋನಾ ವೈರಸ್ ಸೃಷ್ಟಿಸಿದ ಅವಾಂತರಗಳಲ್ಲಿ, ದುರಂತಗಳಲ್ಲಿ ಇದೂ ಒಂದು. ಅಲ್ಲಿ ಕೆಲಸ ಕಳೆದುಕೊಂಡು ನಿರಾಶ್ರಿತರಾದವರ ಸರಿಯಾದ ಸಂಖ್ಯೆ ಸರ್ಕಾರಕ್ಕಾದರೂ ಇದೆಯೋ ಇಲ್ಲವೋ. ಹೇಗಾದರೂ ತವರಿಗೆ ಮರಳೋಣವೆಂದರೆ, ಬರುವುದು ಸುಲಭವಲ್ಲ. ವಂದೇ ಭಾರತ್ ಮಿಷನ್ ಅಡಿಯಲ್ಲಿ ಸೌದಿಯಿಂದ ಇದುವರೆಗೆ 40 ಸಾವಿರ ಮಂದಿಯನ್ನು ಕರೆತರಲಾಗಿದ್ದರೂ ಇನ್ನೂ ಲಕ್ಷಾಂತರ ಜನ ತವರಿಗೆ ಮರಳುವ ತವಕದೊಂದಿಗೆ ಅಲ್ಲಿಯೇ ಕಾಯುತ್ತಿದ್ದಾರೆ. ಆದರೆ, ಅಲ್ಲಿಯವರೆಗೆ ದಿನನಿತ್ಯದ ಹೊಟ್ಟೆಪಾಡಿಗೆ ಏನು ಮಾಡುವುದು? ಇನ್ನೊಬ್ಬರ ಹೊಟ್ಟೆಪಾಡಿನ ಬಗ್ಗೆ ವಿದೇಶಗಳಲ್ಲಿ ಯಾರಾದರೂ ಯಾಕಾದರೂ ಕರುಣೆ ತೋರಿಯಾರು? ಆಗ ತೋರಿದ ದಾರಿಯೇ ಭಿಕ್ಷಾಟನೆ. ಆದರೆ, ಸೌದಿಯಂಥ ಶ್ರೀಮಂತ ರಾಷ್ಟ್ರ ಭಿಕ್ಷಾಟನೆಯನ್ನು ಯಾವಾಗಲೋ ಬಹಿಷ್ಕರಿಸಿದೆ. ಅಲ್ಲಿ ಭಿಕ್ಷೆ ಎತ್ತುವುದು ಅಪರಾಧ. ಈ ಅಪರಾಧದ ಮೇಲೆ ಇದೀಗ ನೂರಾರು ಭಾರತೀಯರು ಸೌದಿಯ ಜೈಲುಗಳಲ್ಲಿ ಬಂದಿಯಾಗಿದ್ದಾರೆ.
ಬದುಕಿನ ದುರಂತವೆಂದರೆ ಇದು. ಇವರಾರೂ ನಿಜವಾದ ಕಳ್ಳರಲ್ಲ, ಸುಳ್ಳರಲ್ಲ, ಮತ್ತೊಬ್ಬರ ತಲೆ ಒಡೆಯುವ ಕೆಲಸ ಮಾಡಿಲ್ಲ. ಆದರೆ, ಹೊಟ್ಟೆಪಾಡಿಗೆ ಭಿಕ್ಷೆ ಎತ್ತುವ ಮೂಲಕ ಸೌದಿ ಆಡಳಿತದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವರೆಲ್ಲ ಜೈಲುಗಳಲ್ಲಿದ್ದುಕೊಂಡು ಅಲ್ಲಿಂದಲೇ “ತಮ್ಮನ್ನು ಕಾಪಾಡಿ’ ಎಂದು ಭಾರತ ಸರ್ಕಾರಕ್ಕೆ ಮನವಿ ಮಾಡುತ್ತಿರುವ ವಿಡಿಯೋ ಇತ್ತೀಚೆಗೆ ವೈರಲ್ ಆಗಿದೆ.
ಹೀಗೆ ಬಂಧಿತರಾದವರಲ್ಲಿ ಹೆಚ್ಚಿನ ಪಾಲು ಮಹಾರಾಷ್ಟ್ರ, ಆಂಧ್ರಪ್ರದೇಶ, ಬಿಹಾರ, ದೆಹಲಿ, ರಾಜಸ್ಥಾನ, ಕೇರಳ, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಕರ್ನಾಟಕ ರಾಜ್ಯದವರಾಗಿದ್ದರೆ ಎನ್ನಲಾಗಿದೆ. ಈ ಎಲ್ಲ ಕಾರ್ಮಿಕರ ವೀಸಾ ಅವಧಿ ಮುಗಿದಿದೆ. ಎರಡು ತುತ್ತಿಗಾಗಿ ಭಿಕ್ಷೆ ಬೇಡಿದವರು ಇವರೆಲ್ಲ. ಇದು ನಿಜಕ್ಕೂ ನೋವಿನ ಸಂಗತಿ. ಇದೇ ರೀತಿ, ಬಾಂಗ್ಲಾದೇಶ, ಇಂಡೋನೇಷ್ಯಾ, ಪಾಕಿಸ್ತಾನದ ಕಾರ್ಮಿಕರೂ ಅಲ್ಲಿ ಜೈಲುಗಳಲ್ಲಿದ್ದಾರೆ.
ಕುಟುಂಬಕ್ಕೆ ನಾವೇ ಆಧಾರ, ನಮಗಿಲ್ಲಿ ಕೆಲಸವಿರಲಿಲ್ಲ. ತವರಿಗೆ ವಾಪಸಾಗಲೂ ಸಾಧ್ಯವಾಗಲಿಲ್ಲ. ಹೀಗಾಗಿ, ಭಿಕ್ಷೆ ಬೇಡಿದೆವು. ನಮ್ಮನ್ನು ಭಾರತಕ್ಕೆ ಕರೆಸಿಕೊಳ್ಳಿ’ ಎಂದು ಅವರು ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.
ಸೌದಿಯಿಂದ ಭಾರತಕ್ಕೆ ಬರಲು ಸುಮಾರು 2 ಲಕ್ಷದ 40 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದು ಸೌದಿ ಸರ್ಕಾರದ ಮೂಲಗಳು ಹೇಳುತ್ತವೆ. ಆದರೆ, ಇದುವರೆಗೆ ಕರೆತರಲಾಗಿರುವ ಸಂಖ್ಯೆ ಕೇವಲ 40 ಸಾವಿರ. ಇವರನ್ನೆಲ್ಲ ಬೇಗ ಅಲ್ಲಿಂದ ಕರೆತನ್ನಿ ಎಂದು ಭಾರತ ಸರ್ಕಾರವನ್ನು ಈ ಕಾರ್ಮಿಕರ ಕುಟುಂಬಗಳು ಒತ್ತಾಯ ಮಾಡುತ್ತಿವೆ.