
♦ ಭಾರತಕ್ಕೆ ಸಿಗುತ್ತಿರುವ ಅಂತಾರಾಷ್ಟೀಯ ಮನ್ನಣೆಯಿಂದ ಚೀನಾ ಕಂಗಾಲು
ನವದೆಹಲಿ: ಚೀನಾದಿಂದಲೇ ಭಾರತ ಅತಿ ಹೆಚ್ಚು ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದೆ. ಆದರೂ ಚೀನಾ ಯಾಕೆ ಪದೇ ಪದೇ ಭಾರತದ ಜತೆ ಆಕ್ರಮಣಕಾರಿಯಾಗಿ ನಡೆದುಕೊಳ್ಳುತ್ತಿದೆ.
ಕಳೆದ ಫೆಬ್ರವರಿಯಲ್ಲೆ ಭಾರತ ಚೀನಾದಿಂದ 317.64 ಶತಕೋಟಿ ರೂ.ಗಳಷ್ಟು ಆಮದು ಮಾಡಿಕೊಂಡಿದೆ. ಇದಕ್ಕೂ ಮೊದಲು 429.55 ಶತಕೋಟಿ ರೂ.ಗಳನ್ನು ಆಮದು ಮಾಡಿಕೊಂಡಿದೆ. ಫೆಬ್ರವರಿಯಲ್ಲಿ ಅಮೆರಿಕದಿಂದ 217.24 ಶತಕೋಟಿ ರೂ.ಗಳಷ್ಟನ್ನು ಆಮದು ಮಾಡಿಕೊಂಡಿದೆ. ಆದರೆ ಕ್ರಮೇಣ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚೀನಾದಿಂದ ಆಮದು ಪ್ರಮಾಣವನ್ನು ಕಡಿಮೆ ಮಾಡಿ ದೇಶೀಯ ವಸ್ತುಗಳನ್ನೇ ಬಳಸುವ ರೀತಿ ಭಾರತೀಯರನ್ನು ಅಣಿಗೊಳಿಸುತ್ತಿರುವುದು ಚೀನಾಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ಗಡಿಯಲ್ಲಿ ಅಭಿವೃದ್ಧಿ, ಚೀನಾ ಕಕ್ಕಾಬಿಕ್ಕಿ:
ಚೀನಾಗೆ ಅತಿ ದೊಡ್ಡ ಮಾರುಕಟ್ಟೆಯೇ ಭಾರತ. ಆದರೂ ಭಾರತದ ವಿರುದ್ಧ ಪದೇ ಪದೇ ಆಕ್ರಮಣಕಾರಿ ಧೋರಣೆ ತಾಳಲು ಚೀನಾಗೆ ಕಾಡುತ್ತಿರುವ ಅಭದ್ರತೆಯೇ ಕಾರಣ ಎಂಬುದು ತಜ್ಞರ ಅಭಿಪ್ರಾಯ. ಇತ್ತೀಚಿನ ವರ್ಷಗಳಲ್ಲಿ ಭಾರತ ಸಾಧಿಸುತ್ತಿರುವ ಅಭಿವೃದ್ಧಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಸಿಗುತ್ತಿರುವ ಮನ್ನಣೆ ಚೀನಾದ ನಿದ್ದೆಗೆಡಿಸಿದೆ ಎಂದು ಹೇಳಲಾಗುತ್ತಿದೆ.
ಕಳೆದ ವರ್ಷಗಳಲ್ಲಿ ಭಾರತ ಚೀನಾ ಗಡಿಯುದ್ದಕ್ಕೂ ಸುಸಜ್ಜಿತವಾದ, ಯಾವುದೇ ವಾತಾವರಣದಲ್ಲಿ ಕಾರ್ಯನಿರ್ವಹಿಸಬಲ್ಲ , ಸೈನಿಕರು ಮತ್ತು ಟ್ಯಾಂಕುಗಳನ್ನು ಸಾಗಿಸಬಲ್ಲ ರಸ್ತೆಗಳನ್ನು ನಮ್ಮದೇ ಆದ ತಂತ್ರಜ್ಞಾನ ಬಳಸಿ ಬಾರ್ಡರ್ ರೋಡ್ ಆರ್ಗನೈಸೇಶನ್ ಮೂಲಕ ನಿರ್ಮಿಸುತ್ತಿರುವುದು ಚೀನಾವನ್ನು ಕಂಗಾಲಾಗಿಸಿದೆ.
ಸರಕು ಸಾಗಣೆ ಸಲೀಸು, ಚೀನಾ ಮುನಿಸು:
ಕಡಿದಾದ ಗುಡ್ಡಪ್ರದೇಶಗಳಿರುವ ಚೀನಾ ಗಡಿಗಳಾದ ಅಸ್ಸಾಂ ಮತ್ತು ಅರುಣಾಚಲ ಪ್ರದೇಶಗಳ ನಡುವೆಯೂ ಉತ್ತಮ ರಸ್ತೆ ಮತ್ತು ಸೇತುವೆಗಳನ್ನು ಭಾರತ ನಿರ್ಮಿಸುವ ಮೂಲಕ ಸೈನಿಕರಿಗೆ ಸೂಕ್ತ ಸಮಯದಲ್ಲಿ ಅತಿ ಹೆಚ್ಚು ಸರಕು ಸಾಗಣೆಯ ಅಗತ್ಯತೆ ಪೂರೈಸಲು ಸಿದ್ಧವಾಗಿದೆ. ಇದು ಅರುಣಾಚಲ ಪ್ರದೇಶದಲ್ಲಿ ನಿರಂತರ ಅತಿಕ್ರಮಣಕ್ಕೆ ಯತ್ನಿಸುತ್ತಿರುವ ತನ್ನ ಪ್ರಯತ್ನಕ್ಕೆ ಹಿನ್ನಡೆಯಾಗಲಿದೆ ಎಂಬುದು ಚೀನಾಗೆ ಅರಿವಾಗಿರುವುದರಿಂದಲೇ ಭಾರತವನ್ನು ಪದೇ ಪದೇ ಕೆಣಕಿ ಹೆದರಿಸುವ ಯತ್ನಕ್ಕೆ ಕೈ ಹಾಕಿದೆ ಎನ್ನಲಾಗುತ್ತಿದೆ.
ರನ್ ವೇ ನಿರ್ಮಾಣ, ಚೀನಾ ಹೈರಾಣ:
ಸಿಯಾಚಿನ್ ಪಕ್ಕದಲ್ಲೇ ಇರುವ ದೌಲತಾಬಾದ್ ಓಲ್ಡಿ ಪ್ರದೇಶದಲ್ಲಿ ಭಾರತ ರನ್ ವೇ ನಿರ್ಮಿಸಿದೆ. ಅಷ್ಟೇ ಅಲ್ಲ, ವಿಶ್ವದ ಅತೀ ದೊಡ್ಡ ಸೈನ್ಯ ಮತ್ತು ಸರಕು ಸಾಗಣೆಯ ವಿಮಾನವಾಗಿರುವ ಗ್ಲೋಬ್ ಮಾಸ್ಟರ್ C -17 ಹರ್ಕ್ಯುಲೆಸ್ ವಿಮಾನ ಇಳಿಸಲು ಅನುಕೂಲತೆಗಳನ್ನು ಮಾಡಿಕೊಂಡಿದೆ. ಸ್ವತಃ ಸಿಯಾಚಿನ್ ಪ್ರದೇಶದಲ್ಲೂ ತನ್ನ ಬತ್ತಳಿಕೆಯಲ್ಲಿರುವ ಎಲ್ಲ ಹೆಲಿಕಾಪ್ಟರುಗಳನ್ನು ಇಳಿಸುವಲ್ಲಿ ಭಾರತ ತೋರಿರುವ ಪರಾಕ್ರಮ ಚೀನಾದ ನಿದ್ದೆಗೆಡಿಸಿದೆ.
ಯಾವುದೇ ಚೌಕಾಸಿಗೆ ಒಪ್ಪದೇ ತನ್ನ ಗಡಿಗಳನ್ನು ಭಾರತ ಭದ್ರಪಡಿಸಿಕೊಳ್ಳುತ್ತಿರುವುದು ಚೀನಾದ ಪಾಲಿಗೆ ಕಷ್ಟವಾಗಿಸಿದೆ. ಆ ಹತಾಶೆಯ ಕಾರಣದಿಂದಾಗಿಯೇ ತನ್ನ ಸೈನಿಕರು ಮತ್ತು ಪಾಕಿಸ್ತಾನ ,ನೇಪಾಳಗಳಂತಹ ರಾಷ್ಟ್ರಗಳ ಮೂಲಕ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪ್ರಚೋದಿಸುತ್ತ ದುರಾಕ್ರಮಣ ತೋರಲು ಮುಂದಾಗಿದೆ.