♦ ಜಗತ್ತಲ್ಲೇ ಇದು ಮೊದಲ ಪ್ರಕರಣ
ನವದೆಹಲಿ: ತಾಯಿಗೆ ಕೊರೋನಾ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದರೂ ನವಜಾತ ಶಿಶುವಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಘಟನೆ ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ವರದಿಯಾಗಿದೆ.
ಭ್ರೂಣದಲ್ಲಿ ಕೋವಿಡ್-19 ಸೋಂಕು ತಗುಲಿರುವ ವಿಶ್ವದ ಮೊದಲ ಪ್ರಕರಣ ಇದು ಎಂದು ವೈದ್ಯರು ಹೇಳಿದ್ದಾರೆ. ಮಗುವಿನ ತಾಯಿಗೆ ಹೆರಿಗೆಗೂ ಮುನ್ನ ಕೋವಿಡ್-19 ಪರೀಕ್ಷೆ ನಡೆಸಲಾಗಿತ್ತು. ಈ ವರದಿಯಲ್ಲಿ ಆಕೆಗೆ ಕೋವಿಡ್-19 ನೆಗೆಟಿವ್ ಬಂದಿತ್ತು. ಆದರೆ ಹೆರಿಗೆಯಾದ 6 ಗಂಟೆಗಳ ನಂತರ ಮಗುವಿಗೆ ಕೋವಿಡ್-19 ಪರೀಕ್ಷೆ ನಡೆಸಲಾಗಿದ್ದು ಸೋಂಕು ದೃಢಪಟ್ಟಿದೆ.
ಕೋವಿಡ್-19 ಸೋಂಕು ತಗುಲಿದ್ದರೂ ನವಜಾತ ಶಿಶುವಿಗೆ ರೋಗಲಕ್ಷಣಗಳು ಕಂಡಿಬಂದಿಲ್ಲ. ಶಿಶು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಮಗುವಿನ ತಾಯಿಗೆ ಜೂ.11 ರಂದು ಕೋವಿಡ್-19 ಸೋಂಕು ಪರೀಕ್ಷೆ ನಡೆಸಿದ್ದಾಗ ಸೋಂಕು ದೃಢಪಟ್ಟಿತ್ತು. ಜೂ.27 ರಂದು ಎರಡನೇ ಬಾರಿಗೂ ಸೋಂಕು ದೃಢಪಟ್ಟಿತ್ತು. ಆದರೆ ಜು.7 ರಂದು ಆಕೆಗೆ ಕೊರೋನಾ ಸೋಂಕು ಪರೀಕ್ಷೆ ವರದಿ ನೆಗೆಟಿವ್ ಬಂದಿದ್ದು ಜು.8 ರಂದು ಹೆರಿಗೆಯಾಗಿತ್ತು. ಮಗುವಿಗೆ 48 ಗಂಟೆಗಳ ನಂತರ ಮತ್ತೊಂದು ಬಾರಿ ಟೆಸ್ಟ್ ಮಾಡಲಾಗುವುದು ಎಂದು ಆಸ್ಪತ್ರೆಯ ವೈದ್ಯರಾದ ಡಾ. ರಾಹುಲ್ ಚೌಧರಿ ತಿಳಿಸಿದ್ದಾರೆ.