ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ ಕಸ್ಟಡಿಯಲ್ಲಿರುವ ಬಹುಭಾಷಾ ನಟಿ ಸಂಜನಾ ಗಲ್ರಾನಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಇಂದು ನಟಿ ಸಂಜನಾ ಸಿಸಿಬಿ ಕಸ್ಟಡಿ ಕೊನೆಗೊಂಡ ಹಿನ್ನೆಲೆಯಲ್ಲಿ ಪೊಲೀಸರು ವಿಡಿಯೋ ಕಾನ್ಫರೆನ್ಸ್ ಮೂಲಕ ನಟಿ ಸಂಜನಾರನ್ನು 1 ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಸಂಜನಾಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು, ಸಂಜೆ ವೇಳೆಗೆ ಸಂಜನಾ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ.
ಸ್ಯಾಂಡಲ್‍ವುಡ್‍ಗೂ ಮಾದಕ ದ್ರವ್ಯ ಜಾಲಕ್ಕೂ ಇರುವ ನಂಟಿನ ಬಗ್ಗೆ ತನಿಖೆ ಕೈಗೊಂಡಿರುವ ಸಿಸಿಬಿ ಪೊಲೀಸರು ನಟಿ ರಾಗಿಣಿ ದ್ವಿವೇದಿ ಬಂಧಿಸಿದ್ದರು. ಬಳಿಕ ಹಲವು ಪೆಡ್ಲರ್ ಗಳನ್ನು ಬಂಧಿಸಿದ್ದರು. ಈ ವೇಳೆ ಲಭ್ಯವಾದ ಮಾಹಿತಿ ಆಧರಿಸಿ ನಟಿ ಸಂಜನಾ ನಿವಾಸದ ಮೇಲೆ ಸೆಪ್ಟೆಂಬರ್ 8 ರಂದು ಸಿಸಿಬಿ ದಾಳೀ ನಡೆಸಿತ್ತು. ಅಂದೇ ಸಂಜೆ ಸಂಜನಾರನ್ನು ವಶಕ್ಕೆ ಪಡೆಯಲಾಗಿತ್ತು.
8 ದಿನಗಳ ಕಾಲ ಸಂಜನಾರನ್ನು ಕಸ್ಟಡಿಗೆ ಪಡೆದಿದ್ದ ಸಿಸಿಬಿ ಸಮಗ್ರ ವಿಚಾರಣೆ ಬಳಿಕ ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಿತ್ತು. ಇನ್ನು ಸಂಜನಾ ಎನ್‍ಡಿಪಿಎಸ್ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಬೇಕಿದ್ದು, ಅರ್ಜಿ ವಿಚಾರಣೆಪೂರ್ಣಗೊಂಡು ಜಾಮೀನು ಮಂಜೂರಾಗುವ ತನಕ ಜೈಲಿನಲ್ಲೇ ಇರಬೇಕಿದೆ.
ಜೈಲು ಸೇರಿದ ಬಹುಭಾಷಾ ನಟಿ ಸಂಜನಾ ಗಲ್ರಾನಿ
Follow Us