ಬೆಂಗಳೂರು: ಜುಲೈ 30ರಂದು ನಿಗದಿಯಾಗಿರುವ ಸಾಮಾನ್ಯ ಪ್ರವೇಶ ಪರೀಕ್ಷೆ ಸಿಇಟಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರದಿಂದ ಕೆಲವು ಸ್ಪಷ್ಟನೆ ಕೋರಿದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಯಾವೆಲ್ಲ ಕ್ರಮ ಕೈಗೊಳ್ಳಲಾಗಿದೆ ಮತ್ತು ಜುಲೈ 30ರಂದು ಪರೀಕ್ಷೆ ನಡೆಸಲೇ ಬೇಕೆ ಎಂಬ ಬಗ್ಗೆ ಉತ್ತರ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ನಾಳೆ ಮಧ್ಯಾಹ್ನ 2.30ರೊಳಗೆ ಈ ಸ್ಪಷ್ಟೀಕರಣ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ. ರಾಜ್ಯದ ಸಿಇಟಿ ಪರೀಕ್ಷೆಗೆ ಹೊರ ರಾಜ್ಯಗಳ ವಿದ್ಯಾರ್ಥಿಗಳು ಕೂಡ ಹಾಜರಾಗುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಂಟೇನ್ ಮೆಂಟ್ ಜೋನ್ ಅಸ್ತಿತ್ವಕ್ಕೆ ಬಂದಿದ್ದು, ಅಲ್ಲಿರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ತೊಂದರೆ ಎದುರಿಸುತ್ತಿದ್ದಾರೆ.