newsics.com
ನವದೆಹಲಿ: ಕೋತಿಗಳ ಮೇಲಿನ ಕೊವ್ಯಾಕ್ಸಿನ್ ಲಸಿಕೆ ಪ್ರಯೋಗ ಗುಣಾತ್ಮಕ ಪರಿಣಾಮ ಬೀರಿದೆ ಎಂದು ಭಾರತ್ ಬಯೊಟೆಕ್ ಸಂಸ್ಥೆ ತಿಳಿಸಿದೆ.
ಲಸಿಕೆಯು ಸಾಂಕ್ರಾಮಿಕ ರೋಗ ಕೊರೋನಾ ವೈರಸ್‌ಗೆ ಬಲಿಷ್ಟ ಮತ್ತು ಸದೃಢ ಪ್ರತಿರಕ್ಷಣಾ(ರೋಗನಿರೋಧಕ) ಪ್ರತಿವರ್ತನೆಯನ್ನು ವೃದ್ಧಿಪಡಿಸಲು ನೆರವಾಗಿದೆ ಎಂದು ಸಂಸ್ಥೆಯ ವೆಬ್‌ಸೈಟ್ ಮಾಹಿತಿ ನೀಡಿದೆ.
ಲಸಿಕೆ ಪ್ರಯೋಗಕ್ಕೆ ಒಳಗಾದ ಕೋತಿಗಳ ದೇಹದಲ್ಲಿ ಸೋಂಕಿನ ವಿರುದ್ಧ ಪ್ರತಿರೋಧಕ ಪ್ರತಿವರ್ತನೆ ಹೆಚ್ಚಿರುವುದು ಸಾಬೀತಾಗಿದೆ ಎಂದು ಭಾರತ್ ಬಯೋಟೆಕ್ ಹೇಳಿದೆ.
ಚಿಕ್ಕಬಾಲದ ಕೋತಿಗಳ ತಳಿಯನ್ನು ಈ ಪ್ರಯೋಗಕ್ಕೆ ಬಳಸಲಾಗಿತ್ತು. 20 ಕೋತಿಗಳನ್ನು 4 ಗುಂಪುಗಳಲ್ಲಿ ವಿಭಜಿಸಿ, ವಿವಿಧ ಡೋಸ್‌ನಲ್ಲಿ ಲಸಿಕೆ ನೀಡಲಾಗಿದೆ. ಲಸಿಕೆಯು ಕೋತಿಗಳ ಮೂಗಿನ ಕುಳಿಯಲ್ಲಿ, ಗಂಟಲಿನಲ್ಲಿ, ಶ್ವಾಸಕೋಶದ ಅಂಗಾಂಶದಲ್ಲಿ ವೈರಸ್‌ನ ಪುನರಾವರ್ತನೆಯನ್ನು ಕಡಿಮೆಗೊಳಿಸುತ್ತದೆ ಎಂಬುದು 14 ದಿನಗಳ ಪ್ರಯೋಗದಿಂದ ದೃಢಪಟ್ಟಿದೆ. ಲಸಿಕೆಯ ಪ್ರಯೋಗಕ್ಕೆ ಗುರಿಯಾದ ಜೀವಿಗಳಲ್ಲಿ ನ್ಯುಮೋನಿಯಾದ ಯಾವುದೇ ಲಕ್ಷಣ ಕಂಡುಬಂದಿಲ್ಲ. ಅಡ್ಡಪರಿಣಾಮವೂ ಕಂಡುಬಂದಿಲ್ಲ ಎಂದು ಭಾರತ್ ಬಯೋಟೆಕ್ ತಿಳಿಸಿದೆ.
ಈ ಮಧ್ಯೆ, ಭಾರತ್ ಬಯೋಟೆಕ್ ಸಂಸ್ಥೆ ಈಗಾಗಲೇ ಮಾನವವ ಮೇಲೆ ಕೊವಾಕ್ಸಿನ್ ಲಸಿಕೆಯ ಪರೀಕ್ಷಾ ಪ್ರಯೋಗ ಆರಂಭಿಸಲಾಗಿದೆ. ಇದಕ್ಕೆ ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್(ಐಸಿಎಂಆರ್)ನಿಂದ ಅನುಮತಿ ಪಡೆಯಲಾಗಿದೆ. ಮುಂದಿನ ವರ್ಷದ ಹೊತ್ತಿಗೆ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸುತ್ತಿರುವ ಕೊರೋನಾ ಲಸಿಕೆ ಮಾರುಕಟ್ಟೆಯಲ್ಲಿ ಲಭ್ಯವಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಲಸಿಕೆ ಸಿಗುವವರೆಗೆ ಕೊರೋನಾ ಭಯವಿರಲಿ