ಕೊಡಗು: ಭೂ ಕುಸಿತದಿಂದ ಅಕ್ಷರಶಃ ನಲುಗಿ ಹೋಗಿರುವ ಕೊಡಗಿನಲ್ಲಿ ಇದೀಗ ಜಿಲ್ಲಾಧಿಕಾರಿ ಕಚೇರಿಗೂ ಭೂಕುಸಿತದ ಭೂತ ಕಾಡಲಾರಂಭಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಡಿಸಿ ಕಚೇರಿಯನ್ನು ನಗರಸಭೆ ಕಚೇರಿಗೆ ಸ್ಥಳಾಂತರಿಸಲಾಗಿದೆ.
ಈಗಾಗಲೇ ಕೊಡಗು ಜಿಲ್ಲೆಯಾದ್ಯಂತ ಹಲವೆಡೆ ಗುಡ್ಡ ಕುಸಿದಿದ್ದು, ಬ್ರಹ್ಮಗಿರಿ ಬೆಟ್ಟ ಅರ್ಚಕರ ಕುಟುಂಬವನ್ನು ಬಲಿ ತೆಗೆದುಕೊಂಡಿದೆ. ಇನ್ನೊಂದೆಡೆ ಮಂಗಳೂರು-ಮಡಿಕೇರಿ ಹೆದ್ದಾರಿ ಕೂಡ ಕುಸಿದಿದೆ.
ಹೀಗಾಗಿ ಮಡಿಕೇರಿ-ಮಂಗಳೂರು ಹೆದ್ದಾರಿ ಪಕ್ಕದ ಗುಡ್ಡದ ಮೇಲಿರುವ ಡಿಸಿ ಕಚೇರಿಯ ಕಟ್ಟಡವೂ ಕುಸಿಯುವ ಭೀತಿ ಎದುರಾಗಿದ್ದು ಮಳೆ ಕಡಿಮೆಯಾಗುವ ತನಕ ನಗರಸಭೆ ಕಾರ್ಯಾಲಯದಲ್ಲೇ ಡಿಸಿ ಕಚೇರಿಯೂ ಕೆಲಸ ಮಾಡಲಿದೆ.
ಇನ್ನುಳಿದಂತೆ ಡಿಸಿ ಕಚೇರಿ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಂದಾಯ, ಆರೋಗ್ಯ, ಗಣಿ ಮತ್ತು ಭೂವಿಜ್ಞಾನ, ಶಿಕ್ಷಣ, ಸರ್ವೇ, ಕಾರ್ಮಿಕ ಸೇರಿದಂತೆ ಉಳಿದ ಸರ್ಕಾರಿ ಕಾರ್ಯಾಲಯಗಳನ್ನು ಮುಚ್ಚಲಾಗಿದೆ.
14.44 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಡಿಸಿ ಕಚೇರಿಯನ್ನು ಅಂದಿನ ಸಿಎಂ ಸಿದ್ಧರಾಮಯ್ಯ 2014 ರಲ್ಲಿ ಉದ್ಘಾಟಿಸಿದ್ದರು.
ಭಾರಿ ಮಳೆ ಹಿನ್ನೆಲೆಯಲ್ಲಿ ತಜ್ಞರು ಡಿಸಿ ಕಚೇರಿ ಬಳಿಯಲ್ಲೂ ಮಣ್ಣು ಕುಸಿತದ ಮುನ್ನೆಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಡಿಸಿ ಕಚೇರಿಗೂ ಭೂಕುಸಿತದ ಭೀತಿ…! ಆಫೀಸ್ ಸ್ಥಳಾಂತರ…!
Follow Us