newsics.com
ನವದೆಹಲಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಹುತೇಕ ಖಚಿತವಾಗಿದೆ. ವಿಧಾನಸಭೆಗೆ ಇನ್ನು ಕೇವಲ ನಾಲ್ಕು ತಿಂಗಳು ಬಾಕಿ ಇರುವಾಗಲೇ ಬಿಜೆಪಿ ವರಿಷ್ಟ ಮಂಡಳಿ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ಆರಂಭಿಸಿದೆ.
ಗುಜರಾತ್ ವಿಧಾನಸಭೆ ಚುನಾವಣಾ ಫಲಿತಾಂಶ ಬಳಿಕ ಬಿಜೆಪಿ ವರಿಷ್ಟರ ಪೂರ್ಣ ಗಮನ ರಾಜ್ಯದತ್ತ ಹರಿಯಲಿದೆ. ರಾಜ್ಯದಲ್ಲಿನ ವಾಸ್ತವ ರಾಜಕೀಯ ಪರಿಸ್ಥಿತಿಯ ಪೂರ್ಣ ವರದಿ ಬಿಜೆಪಿ ವರಿಷ್ಟರ ಕೈ ಸೇರಿದ್ದು, ಬಿಜೆಪಿ ದಿನೇ ದಿನೇ ಜನಪ್ರಿಯತೆ ಕಳೆದುಕೊಳ್ಳುತ್ತಿದೆ ಎಂಬ ಮುನ್ಸೂಚನೆ ನೀಡಿದೆ.
ರಾಜ್ಯದ ಬಹುತೇಕ ಬಿಜೆಪಿ ಶಾಸಕರ ಸೋಮಾರಿತನ ಹಾಗೂ ಕ್ಷೇತ್ರದ ನಿರ್ಲಕ್ಷ್ಯದಿಂದಾಗಿ ಮತದಾರರು ಇತರ ಪಕ್ಷಗಳತ್ತ ಆಸಕ್ತಿ ತೋರಿಸುತ್ತಿದ್ದಾರೆ ಎಂಬ ಅಂಶ ಕೂಡ ವರದಿಯಲ್ಲಿ ಪ್ರಸ್ತಾಪವಾಗಿದೆ ಎಂದು ಹೇಳಲಾಗುತ್ತಿದೆ.
ಹಳೇ ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್ ತನ್ನ ನೆಲೆಯನ್ನು ಭದ್ರಗೊಳಿಸುವತ್ತ ಹೆಜ್ಜೆ ಇರಿಸಿದ್ದರೆ, ಕಾಂಗ್ರೆಸ್ ಹಲವು ಕಾರ್ಯಕ್ರಮಗಳ ಮೂಲಕ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂಬ ತೀರ್ಮಾನಕ್ಕೆ ಬಿಜೆಪಿ ವರಿಷ್ಟ ಮಂಡಳಿ ಬಂದಿದೆ.
ಪ್ರತಿಪಕ್ಷಗಳ ತಂತ್ರಕ್ಕೆ ಪ್ರತಿತಂತ್ರ ಹೂಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಮಹಿಳಾ ಮುಖ್ಯಮಂತ್ರಿ ನೇಮಕಕ್ಕೆ ಬಿಜೆಪಿ ವರಿಷ್ಟರು ಗಂಭೀರ ಚಿಂತನೆ ನಡೆಸಿದ್ದಾರೆ. ಪ್ರಸಕ್ತ ಕೇಂದ್ರ ಸಚಿವರಾಗಿರುವ ಶೋಭಾ ಕರಂದ್ಲಾಜೆ ಮುಖ್ಯಮಂತ್ರಿ ಹುದ್ದೆಯ ರೇಸ್ನಲ್ಲಿ ಇದ್ದಾರೆ. ಈ ಮೂಲಕ ಮಹಿಳೆಯರ ಮತ ಸೆಳೆಯುವ ಯತ್ನವೂ ಬಿಜೆಪಿಯದಾಗಿದೆ.
ಶೋಭಾ ಕರಂದ್ಲಾಜೆ ಅವರು ಯಡಿಯೂರಪ್ಪ ಅವರ ರಾಜಕೀಯ ಬಳಗದಲ್ಲಿ ಗುರುತಿಸಿಕೊಂಡಿರುವ ಕಾರಣ ಲಿಂಗಾಯತ ಮತಗಳನ್ನು ಕೂಡ ಸೆಳೆಯುವ ಶಕ್ತಿ ಹೊಂದಿದ್ದಾರೆ ಎಂಬ ತೀರ್ಮಾನಕ್ಕೆ ಬಿಜೆಪಿ ವರಿಷ್ಟರು ಬಂದಿದ್ದಾರೆ.
ಈ ಬಾರಿ ಒಕ್ಕಲಿಗರಿಗೆ ಅವಕಾಶ ನೀಡಿ ಎಂದು ಟ್ರಂಪ್ ಕಾರ್ಡ್ ಬಳಸುತ್ತಿರುವ ಡಿ ಕೆ ಶಿವಕುಮಾರ್ ಪ್ಲ್ಯಾನ್ನ್ನು ಕೂಡ ಈ ಮೂಲಕ ನಿಷ್ಕಿಯಗೊಳಿಸಲು ಬಿಜೆಪಿ ತಂತ್ರ ಹೂಡಿದೆ.
ದೆಹಲಿಯಲ್ಲಿ ಬಿಜೆಪಿ ವರಿಷ್ಟರ ಜತೆ ಮುಖ್ಯಮಂತ್ರಿ ಬೊಮ್ಮಾಯಿ ನಡೆಸಿದ ಮಾತುಕತೆ ವೇಳೆ ರಾಜ್ಯದ ಪ್ರಸಕ್ತ ರಾಜಕೀಯ ಪರಿಸ್ಥಿತಿ ಕುರಿತ ವಾಸ್ತವ ಪರಿಸ್ಥಿತಿಯನ್ನು ಮನದಟ್ಟು ಮಾಡಿಕೊಡಲಾಗಿದೆ ಎಂದು ದೆಹಲಿ ಮೂಲಗಳು ತಿಳಿಸಿವೆ.
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ- ನಾಡಿನಾದ್ಯಂತ ಸಂಚರಿಸಲಿರುವ ಕನ್ನಡ ರಥಕ್ಕೆ ಅದ್ಧೂರಿ ಚಾಲನೆ