ಬೆಂಗಳೂರು: ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ ಮಂಗಳವಾರ(ಜುಲೈ 14) ರಾತ್ರಿ 8ರಿಂದ ಒಂದು ವಾರ ಲಾಕ್ ಡೌನ್ ಘೋಷಿಸಿದೆ.
ಸಿಎಂ ಕಚೇರಿಯ ಪರಿಷ್ಕರಿಸಿದ ಪ್ರಕಟಣೆಯ ಪ್ರಕಾರ, ಜು.14ರ ರಾತ್ರಿ 8 ರಿಂದ ಜು.22ರ ಬೆಳಗ್ಗೆ 5ರವರೆಗೆ ಲಾಕ್ ಡೌನ್ ಜಾರಿಯಲ್ಲಿರಲಿದೆ. ಈಗಾಗಲೇ ಸರ್ಕಾರವೇ ರಾತ್ರಿ ಕರ್ಫ್ಯೂ ಜಾರಿಗೊಳಿಸಿರುವುದರಿಂದ ಒಂದು ವಾರದ ಲಾಕ್ ಡೌನ್ ಬುಧವಾರ ಬೆಳಗ್ಗೆಯಿಂದ ಅನ್ವಯವಾಗಲಿದೆ.
ರಾಜ್ಯದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ರಾಜ್ಯದ ಮುಖ್ಯ ಕಾರ್ಯದರ್ಶಿ ಸೇರಿ ಹಿರಿಯ ಅಧಿಕಾರಿಗಳು, ಸಚಿವರೊಂದಿಗೆ ಸಿಎಂ ಸಮಾಲೋಚನೆ ನಡೆಸಿದ್ದು ಕೊರೋನಾ ಸೋಂಕು ತಡೆಯುವ ಉದ್ದೇಶದಿಂದ ಒಂದು ವಾರ ಲಾಕ್ ಡೌನ್ ಜಾರಿ ಮಾಡುವ ಬಗ್ಗೆ ಚರ್ಚೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ.