ನವದೆಹಲಿ: ಮಹದಾಯಿ ಜಲ ವಿವಾದ ಕುರಿತಂತೆ ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕ ರಾಜ್ಯಗಳು ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳನ್ನು ಆಗಸ್ಟ್ ನಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.
ಸುಪ್ರೀಂ ಕೋರ್ಟ್’ನ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ, ಕೆ.ಎಂ.ಜೋಸೆಫ್ ಅವರಿದ್ದ ನ್ಯಾಯಪೀಠವು, ವಿವಾದಾಸ್ಪದವಾಗಿರುವ ಮಹದಾಯಿ ನೀರು ಹಂಚಿಕೆ ವಿಷಯದಲ್ಲಿ ನಿರ್ದೇಶನ ನೀಡಲು ಆಗಸ್ಟ್ 24ರಿಂದ ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತು. ಕಳಸಾ-ಬಂಡೂರಿ ಯೋಜನೆಗೆ ಬಜೆಟ್ನಲ್ಲಿ ಅನುದಾನ ಮೀಸಲಿರಿಸಿರುವುದನ್ನು ಘೋಷಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆಯ ವಿರುದ್ಧ ಕಳೆದ ಮಾರ್ಚ್ನಲ್ಲಿ ಗೋವಾ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ನ್ಯಾಯಮಂಡಳಿ 2018ರ ಆಗಸ್ಟ್ ನಲ್ಲಿ ನೀಡಿದ ತೀರ್ಪಿನ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ 2020ರ ಫೆಬ್ರವರಿ 27ರಂದು ಅಧಿಸೂಚನೆ ಹೊರಡಿಸಿದೆ. ಇದನ್ನು ಆಧರಿಸಿಯೇ ಕರ್ನಾಟಕ ಸರ್ಕಾರ ಯೋಜನೆಗೆ ಅನುದಾನ ಮೀಸಲಿರಿಸಿತ್ತು.
ತನ್ನ ಅಂತಿಮ ಆದೇಶದಲ್ಲಿ ನ್ಯಾಯಮಂಡಳಿಯು ಕರ್ನಾಟಕಕ್ಕೆ 13.42 ಟಿಎಂಸಿ ಅಡಿ, ಗೋವಾಗೆ 24 ಟಿಎಂಸಿ ಅಡಿ ಹಾಗೂ ಮಹಾರಾಷ್ಟ್ರಕ್ಕೆ 1.3 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿತ್ತು. ಯೋಜನೆಗೆ ವಿರೋಧಿಸುತ್ತಿರುವ ಗೋವಾ, ನೀರು ತಿರುಗಿಸುವುದರಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ ಎಂದು ವಾದಿಸುತ್ತಿದೆ.