newsics.com
ಮಂಗಳೂರು: ಪ್ರಧಾನಿ ಮೋದಿಯವರ ಬಿಹಾರ ಕಾರ್ಯಕ್ರಮದ ವೇಳೆ ದುಷ್ಕೃತ್ಯ ಸಂಚು ರೂಪಿಸಿದ್ದ ಹಿನ್ನೆಲೆಯಲ್ಲಿ ಬುಧವಾರ ರಾಷ್ಟ್ರೀಯ ತನಿಖಾ ದಳ (ಎನ್ಐಎ) ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆ ದಾಳಿ ನಡೆಸಿದೆ.
ಬಂಟ್ವಾಳ, ಬೆಳ್ತಂಗಡಿ, ಉಪ್ಪಿನಂಗಡಿ, ವೇಣೂರು ಸೇರಿದಂತೆ 16 ಕಡೆ ಹಲವರ ಮನೆ, ಕಚೇರಿಗಳು, ಆಸ್ಪತ್ರೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ವರ್ಷ 2022ರ ಜುಲೈ ತಿಂಗಳಲ್ಲಿ ಬಿಹಾರದ ಪಾಟ್ನಾದಲ್ಲಿ ನಡೆದಿದ್ದ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಉಗ್ರರು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ಅಂಶ ಬಹಿರಂಗವಾಗಿತ್ತು. ಈ ಪ್ರಕರಣದ ತನಿಖೆ ನಡೆಸುತ್ತಿರುವ ಐಎನ್ಎ ಅಧಿಕಾರಿಗಳು ಫುಲ್ವಾರಿ ಶರೀಫ್ ಎಂಬುವನನ್ನು ಬಂಧಿಸಿದ್ದರು.
ಕಾರ್ಯಕ್ರಮವನ್ನು ವಿಫಲಗೊಳಿಸಲು ಸಂಚು ನಡೆಸಲು ದಕ್ಷಿಣ ಕನ್ನಡದಿಂದ ಹಣಕಾಸು ನೆರವು ನೀಡಲಾಗಿದೆ ಎಂಬ ಸತ್ಯ ತನಿಖೆ ವೇಳೆ ಬಹಿರಂಗವಾಗಿತ್ತು. ಇದರ ಜಾಡು ಹಿಡಿದು ಹೊರಟ ಅಧಿಕಾರಿಗಳಿಗೆ ಗಲ್ಫ್ ರಾಷ್ಟ್ರಗಳಿಂದ ಹವಾಲಾ ಮೂಲಕ ಭಾರತಕ್ಕೆ ಹಣ ಬರುತ್ತಿದ್ದು, ಇದನ್ನು ಭಾರತದಲ್ಲಿ ಭಯೋತ್ಪಾದಕ ಎಸಗಲು ಬಳಸಲಾಗುತ್ತಿದೆ ಎಂಬ ಸುಳಿವು ಲಭಿಸಿತ್ತು.
ಕೃತ್ಯಕ್ಕೆ ಸಂಬಂಧಿಸಿದಂತೆ ವಿವಿಧ ಖಾತೆಗಳಿಗೆ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪವೂ ಸಹ ಇವರ ಮೇಲಿದೆ ಎನ್ನಲಾಗಿದೆ.
ದಾಳಿ ವೇಳೆ ನಂದಾವರಕ್ಕೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಂದಾವರದ ವ್ಯಕ್ತಿಯೊಬ್ಬರು ಹಣಕಾಸಿನ ನೆರವು ನೀಡಿದ ಮೂಲ ಹಾಗೂ ವಿವರಗಳನ್ನು ಪಡೆದುಕೊಳ್ಳಲು ದಾಳಿ ನಡೆದಿತ್ತು. ಮೂವರ ವಿಚಾರಣೆ ನಡೆಸಲಾಗಿತ್ತು. ಇವರಲ್ಲಿ ಒಬ್ಬರು ದುಬೈನಿಂದ ಕಳೆದ ವರ್ಷ ಊರಿಗೆ ಮರಳಿದ್ದರು. ಉಳಿದವರು ಮೆಲ್ಕಾರ್ನಲ್ಲಿ ಪಾಸ್ ಪೋರ್ಟ್ ವ್ಯವಹಾರ ಮಾಡಿಕೊಂಡಿದ್ದರು ಎಂದು ಎನ್ಐಎ ಮೂಲಗಳು ತಿಳಿಸಿವೆ.