ಜಾರ್ಖಂಡ್: ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳನ್ನು ಪ್ರೋತ್ಸಾಹಿಸುವುದು ಮತ್ತು ಮಕ್ಕಳನ್ನು ಸರ್ಕಾರಿ
ಶಾಲೆಯತ್ತ ಸೆಳೆಯುವ ದೃಷ್ಟಿಯಿಂದ ಜಾರ್ಖಂಡ್ ಶಿಕ್ಷಣ ಸಚಿವರು ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಟಾಪರ್‍ಗಳಿಗೆ ಕಾರು ಉಡುಗೊರೆಯಾಗಿ ನೀಡಿ ಸುದ್ದಿಯಾಗಿದ್ದಾರೆ.
ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಫಲಿತಾಂಶದ ವೇಳೆ ಟಾಪರ್‍ಗಳಿಗೆ ಕಾರು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದ ಸಚಿವರು ತಮ್ಮ ಮಾತಿನಂತೆ ಇಬ್ಬರು ವಿದ್ಯಾರ್ಥಿಗಳಿಗೆ ಕಾರ್ ಗಿಫ್ಟ್ ಆಗಿ ನೀಡಿದ್ದಾರೆ.
ಪಿಯುಸಿಯಲ್ಲಿ ಎಸ್‍ಆರ್‍ಎಸ್‍ಎಸ್‍ಆರ್ ಸ್ಕೂಲ್‍ನ ಅಮಿತ್ ಕುಮಾರ್ ಮತ್ತು ಎಸ್‍ಎಸ್‍ಎಲ್‍ಸಿಯಲ್ಲಿ ನೇತಾರತ್ ರೆಸಿಡೆನ್ಸಿಯಲ್ ಸ್ಕೂಲ್‍ನ ಮನೀಶ್ ಕುಮಾರ್ ಟಾಪರ್ ಗಳಾಗಿ ಹೊರಹೊಮ್ಮಿದ್ದು, ಇವರಿಗೆ ಜಾರ್ಖಂಡ್‍ನ ಶಿಕ್ಷಣ ಸಚಿವ ಜಗರನಾಥ್ ಮಾಥೋ ಕಾರನ್ನು ಕೊಡುಗೆಯಾಗಿ ನೀಡಿದ್ದು, ಈ ಕಾರ್‍ನ್ನು ಸಚಿವರ ಪರವಾಗಿ ಜಾರ್ಖಂಡ್ ವಿಧಾನಸಭೆಯ ಸ್ಪೀಕರ್ ರಬೀಂದ್ರನಾತ್ ಮಾಥೋ ಹಸ್ತಾಂತರಿಸಿದರು.
ಕಾರ್ ವಿತರಣೆ ಬಳಿಕ ಮಾತನಾಡಿದ ಸಚಿವರು, ಮಕ್ಕಳಲ್ಲಿ ಶಿಕ್ಷಣದ ಕುರಿತು ಒಲವು ಮೂಡಿಸುವುದು, ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುವ ಪ್ರವೃತ್ತಿ ಬೆಳೆಸುವುದು ಈ ಕೊಡುಗೆಯ ಉದ್ದೇಶ, ನಾನು ಕೊಟ್ಟ ಮಾತಿನಂತೆ ಕಾರ್ ವಿತರಿಸಿದ್ದೇನೆ ಎಂದಿದ್ದಾರೆ.
ಶಿಕ್ಷಣದ ಕುರಿತು ಅಪಾರ ಪ್ರೀತಿ ಹೊಂದಿರುವ ಸಚಿವ ಜಗರನಾಥ್ ಮಾಥೋ 25 ವರ್ಷಗಳ ಬಳಿಕ ತಮ್ಮ ಶಿಕ್ಷಣವನ್ನು ಮುಂದುವರೆಸುವುದಕ್ಕಾಗಿ 11 ನೇ ತರಗತಿಗೆ ಪ್ರವೇಶ ಕೂಡ ಪಡೆದುಕೊಂಡಿದ್ದಾರೆ. ಕೆಲ ಸಂಘ-ಸಂಸ್ಥೆಗಳ ಸಹಾಯದಿಂದ ಈ ವಿದ್ಯಾರ್ಥಿಗಳಿಗೆ ಕಾರ್ ಕೊಡುಗೆಯಾಗಿ ನೀಡಿರುವ ಸಚಿವರು ಮುಂದಿನ ವರ್ಷದಿಂದ ಎಸ್‍ಎಸ್‍ಎಲ್‍ಸಿ,ಪಿಯುಸಿ ಟಾಪರ್‍ಗಳ ಉನ್ನತ ಶಿಕ್ಷಣಕ್ಕೆ ನೆರವಾಗುವುದಾಗಿ ಪ್ರಕಟಿಸಿದ್ದಾರೆ.
ಸಚಿವರಿಂದ ಉಡುಗೊರೆಯಾಗಿ ಕಾರು ಪಡೆದ ವಿದ್ಯಾರ್ಥಿಗಳ ಸಂಭ್ರಮ ಮುಗಿಲುಮುಟ್ಟಿದ್ದು, ಇಂತಹದೊಂದು ಕೊಡುಗೆ ಸಿಗಬಹುದೆಂದು ಕನಸಿನಲ್ಲೂ ಎಣಿಸಿರಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಟಾಪರ್‍ಗಳಿಗೆ ಕಾರ್ ನೀಡಿದ ಸಚಿವರು ಇತ್ತೀಚಿಗಷ್ಟೇ ತಮ್ಮ ಕ್ಷೇತ್ರದಲ್ಲಿ ಜಿಲ್ಲೆಗೆ ಮೊದಲು ಬಂದವರಿಗೆ ಬೈಕ್ ಹಾಗೂ ಶೇಕಡಾ 75 ರಷ್ಟು ಸ್ಕೋರ್ ಮಾಡಿದವರಿಗೆ 340 ಹೆಚ್ಚು ಬೈಸಿಕಲ್ ಕೂಡ ವಿತರಿಸಿ ತಮ್ಮ ಶಿಕ್ಷಣ ಪ್ರೇಮ ಮೆರೆದಿದ್ದಾರೆ.
ಎಸ್‍ಎಸ್‍ಎಲ್‍ಸಿ, ಪಿಯುಸಿ ಟಾಪರ್ ವಿದ್ಯಾರ್ಥಿಗಳಿಗೆ ಕಾರ್ ಗಿಫ್ಟ್ ಕೊಟ್ಟ ಶಿಕ್ಷಣ ಸಚಿವ
Follow Us