ನವದೆಹಲಿ: ಲಾಕ್ ಡೌನ್ ನಿಂದ ಹೊರಗೆ ಬರುವ ಕಾರ್ಯತಂತ್ರದ ಬಗ್ಗೆ ಮೇ 15 ರೊಳಗೆ ಸಲಹೆಗಳನ್ನು ಹಂಚಿಕೊಳ್ಳುವಂತೆ ಎಲ್ಲ ರಾಜ್ಯದ ಮುಖ್ಯಮಂತ್ರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆನೀಡಿದ್ದಾರೆ.
ಸೋಮವಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ 6 ಗಂಟೆಗೂ ಹೆಚ್ಚು ಕಾಲ ನಡೆಸಿದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿಗಳಿಗೆ ಈ ಸಲಹೆ ನೀಡಿದ್ದಾರೆ.
ಕೊರೋನಾ ತಡೆಗೆ ವಿಧಿಸಲಾಗಿರುವ ಮೂರನೇ ಹಂತದ ಲಾಕ್ ಡೌನ್ ಮೇ 17ಕ್ಕೆ ಮುಕ್ತಾಯಗೊಳ್ಳಲಿದ್ದು, ಮೇ 15 ರ ವೇಳೆಗೆ ಲಾಕ್ ಡೌನ್ ನಿಂದ ಹೊರಬರುವ ವಿಧಾನಗಳ ಬಗ್ಗೆ ವಿವರಿಸುವಂತೆ ತಿಳಿಸಿದ್ದಾರೆ.
ಲಾಕ್ ಡೌನ್ ಪ್ರತಿ ಹಂತದಲ್ಲೂ ಬದಲಾಗಿದೆ. ಮೊದಲ ಹಂತದ ಲಾಕ್ ಡೌನ್ ನಲ್ಲಿ ಕೈಗೊಂಡ ಕ್ರಮಗಳು ಎರಡನೇ ಹಂತದಲ್ಲಿ ಅಗತ್ಯವಿರಲಿಲ್ಲ, ಎರಡನೇ ಹಂತದ ಲಾಕ್ ಡೌನ್ ನಲ್ಲಿ ಕೈಗೊಂಡ ಕ್ರಮಗಳು ಮೂರನೇ ಹಂತದಲ್ಲಿ ಬೇಕಿರಲಿಲ್ಲ. ಈಗ ನಾವು ಮಾರ್ಗಸೂಚಿಗಳಿಗೆ ಬದ್ಧವಾಗಿದ್ದುಕೊಂಡೇ ಕೊರೋನಾ ಹರಡುವಿಕೆ ತಡೆಯಬೇಕಿದೆ. ಸಾರ್ವಜನಿಕ ಚಟುವಟಿಕೆಗಳನ್ನೂ ಆರಂಭಿಸಬೇಕೆಂದು ಮೋದಿ ಹೇಳಿದ್ದಾರೆ.
ರೈಲು ಸೇವೆಗಳನ್ನು ಪ್ರಾರಂಭಿಸುವುದು ಆರ್ಥಿಕ ಚಟುವಟಿಕೆಗಳ ಪುನಶ್ಚೇತನಕ್ಕೆ ಅಗತ್ಯವಾಗಿದ್ದು, ನಿಗದಿತ ಪ್ರದೇಶಗಳಿಗೆ ಮಾತ್ರ ಇದು ಸೀಮಿತವಾಗಿರಲಿದೆ ಎಂದು ಮೋದಿ ಹೇಳಿದ್ದಾರೆ.