
ಕಾರವಾರ: ಶಿಕ್ಷಕರು ಅಂದ್ರೆನೇ ಹಾಗೇ ಅವರ ಮನಸ್ಸು ಸದಾ ಮಕ್ಕಳಿಗಾಗಿ ಮಿಡಿಯುತ್ತೆ. ಇಲ್ಲೊಬ್ಬರು ಶಿಕ್ಷಕಿ ಮನಸ್ಸು ನಿವೃತ್ತಿ ಬಳಿಕವೂ ಮಕ್ಕಳ ಶಿಕ್ಷಣಕ್ಕಾಗಿ ತುಡಿಯುತ್ತಲೇ ಇತ್ತು. ಅದರ ಫಲವಾಗಿ ಅವರು ಕರ್ನಾಟಕದ ಅತ್ಯಂತ ಹಿಂದುಳಿದ ತಾಲೂಕಿನ ಗುಡ್ಡಗಾಡು ಮಕ್ಕಳಿಗೆ ಆನ್’ಲೈನ್’ನಲ್ಲೆ ಇಂಗ್ಲೀಷ್ ಬೋಧಿಸುವ ಮೂಲಕ ಸಾರ್ಥಕ್ಯ ಕಂಡುಕೊಳ್ಳುತ್ತಿದ್ದಾರೆ.
ಮೈಸೂರಿನ ಒಂಟಿಕೊಪ್ಪಲು ನಿವಾಸಿಯಾಗಿರುವ ನಿವೃತ್ತ ಶಿಕ್ಷಕಿ ಆರ್. ಪೂರ್ಣಿಮಾ ದೂರದ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಡೇರಿಯಾ ಎಂಬ ಕುಗ್ರಾಮದ ಮಕ್ಕಳ ಪಾಲಿನ ದೇವತೆಯಾಗಿದ್ದಾರೆ.
ಜೊಯಿಡಾ ತಾಲ್ಲೂಕಿನ ಡೇರಿಯಾ ಎಂಬ ಕುಗ್ರಾಮದಲ್ಲಿನ ಈ ಮಕ್ಕಳು ದಿನದಲ್ಲಿ ಒಂದಷ್ಟು ಗಂಟೆ ಒಟ್ಟಿಗೆ ಸೇರಿ ತರಗತಿ ಸೃಷ್ಟಿಸುತ್ತಾರೆ. ಇವರಿಗೆ ಮೈಸೂರು ನಗರದಿಂದ ಶಿಕ್ಷಕಿ ಆರ್.ಪೂರ್ಣಿಮಾ ಮೊಬೈಲ್ ಮೂಲಕ ಇಂಗ್ಲೀಷ್ ಬೋಧಿಸುತ್ತಾರೆ. ಇಲ್ಲಿನ ಬುಡಕಟ್ಟು ಜನಾಂಗದ ನಾಲ್ಕನೇ ತರಗತಿಯಿಂದ ಎಸ್.ಎಸ್.ಎಲ್.ಸಿ ವರೆಗಿನ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.
ಜೋಯಿಡಾ ತಾಲೂಕು ಕೇಂದ್ರದಿಂದ ಸರಿಸುಮಾರು 12 ಕಿಲೋಮೀಟರ್ ದೂರದ ಈ ಗ್ರಾಮದಲ್ಲಿ ಒಂದೆರಡು ಮನೆಗಳ ಬಳಿ ಮಾತ್ರ ಮೊಬೈಲ್ ನೆಟ್ವರ್ಕ್ ಸ್ವಲ್ಪ ಸಿಗುತ್ತದೆ. ಇಲ್ಲಿ ಇಂಟರ್ನೆಟ್ ಸಂಪರ್ಕವಂತೂ ದೂರದ ಮಾತು. ಆದ್ದರಿಂದ ಆನ್ಲೈನ್ ತರಗತಿ ನಡೆಸುವುದು ಕಷ್ಟ. ಹೀಗಾಗಿ ಪೂರ್ಣಿಮಾ ಅವರು, ಮೊಬೈಲ್ ಫೋನ್ ಮೂಲಕವೇ ಜ್ಞಾನಧಾರೆ ಹರಿಸುತ್ತಿದ್ದಾರೆ.
ನಿತ್ಯವೂ ಒಂದು ಗಂಟೆ ಪಾಠ:
ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ನಿವೃತ್ತ ಅಧ್ಯಾಪಕಿಯಾಗಿರುವ ಪೂರ್ಣಿಮಾ ಅವರು ಜೊಯಿಡಾದ ಕುಣಬಿ ಸಮಾಜದ ಅಧ್ಯಕ್ಷ ಡಾ.ಜಯಾನಂದ ಡೇರೇಕರ್ ಜತೆ ಸೇರಿ ಇಂತಹದೊಂದು ಪ್ರಯತ್ನ ನಡೆಸುತ್ತಿದ್ದಾರೆ.
ಒಂದು ಮೊಬೈಲ್ ಫೋನ್ ಹಾಗೂ ಬ್ಲೂಟೂಥ್ ಸ್ಪೀಕರ್ ಖರೀದಿಸಿ ತಂದರು. ಮೊಬೈಲ್ ಅನ್ನು ಸಿಗ್ನಲ್ ಸಿಗುವ ಮನೆಯೊಂದರಲ್ಲಿಟ್ಟರು. ಬಳಿಕ ಬ್ಲೂಟೂಥ್ ಮೂಲಕ ಸ್ಪೀಕರ್ಗೆ ಸಂಪರ್ಕ ನೀಡಿ ಧ್ವನಿವರ್ಧಿಸಿದರು. ಈ ರೀತಿ ಸುಮಾರು ಒಂದು ತಿಂಗಳಿನಿಂದ ನಿತ್ಯವೂ ಒಂದು ತಾಸು ಪಾಠ ಮಾಡುತ್ತಿದ್ದಾರೆ.
ಮಕ್ಕಳ ಉತ್ಸಾಹ:
ಕೊರೋನಾ ಲಾಕ್ಡೌನ್ನ ಈ ದಿನಗಳಲ್ಲಿ ಎಲ್ಲೆಡೆ ಆನ್ಲೈನ್ ಶಿಕ್ಷಣದ್ದೇ ಚರ್ಚೆಯಾಗುತ್ತಿದೆ. ಆದರೆ, ಕಾಡಿನ ಮಧ್ಯೆ ಇರುವ ಈ ಊರಿನಲ್ಲಿ ಅದು ಕಷ್ಟ ಸಾಧ್ಯ. ಅದಕ್ಕೆ ಮೊಬೈಲ್ ಫೋನ್ ಮೂಲಕ ತರಗತಿ ನಡೆಸುತ್ತಿದ್ದಾರೆ.
ಈ ಮೊಬೈಲ್ ಮೂಲಕ ಸಿಗುವ ಇಂಗ್ಲೀಷ್ ಪಾಠ ಕಲಿಯಲು ಕೂಡ ಅಲ್ಲಿನ ವಿದ್ಯಾರ್ಥಿಗಳು ಕಿಲೋಮೀಟರ್ ದೂರ ಕಾಡಿನಲ್ಲಿ ನಡೆದು ಬರಬೇಕು. ಆದರೂ ಮಕ್ಕಳ ಉತ್ಸಾಹ ತಗ್ಗಿಲ್ಲ. ಕಲಿಯಬೇಕೆನ್ನುವ ಛಲಕ್ಕೆ ನಿವೃತ್ತ ಅಧ್ಯಾಪಕಿಯ ಪ್ರೋತ್ಸಾಹ ಮತ್ತಷ್ಟು ಜೀವತುಂಬಿದ್ದು ಕಾಡಿನ ನಡುವೆ ಕಲಿಕೆಯ ಹಾದಿ ತೆರೆದಿದೆ.