ಬೆಂಗಳೂರು: ದಣಿವರಿಯದ ನಾಯಕ ಎಂದೇ ಕರೆಸಿಕೊಳ್ಳುವ ಸಿಎಂ ಬಿಎಸ್ವೈ ಸದಾ ಹೋರಾಟ, ಓಡಾಟ ಹಾಗೂ ತಮ್ಮ ಕ್ರಿಯಾಶೀಲ ನಡುವಳಿಕೆಯಿಂದಲೇ ಗುರುತಿಸಿಕೊಂಡವರು. ಈಗಲೂ ಆ ಜೀವಂತಿಕೆಗೆ ಈ ಕೊರೋನಾ ಅಡ್ಡಿಯಾಗಿಲ್ಲ.
ಕೊರೋನಾ ಚಿಕಿತ್ಸೆ ನಡೆಯುತ್ತಿದ್ದರೂ ಅವರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟಿಲ್ಲ.
ನಾಡದೊರೆ 78 ವರ್ಷದ ಯಡಿಯೂರಪ್ಪ ಕೊರೋನಾ ಚಿಕಿತ್ಸೆಗಾಗಿ ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೋವಿಡ್-19 ಲಕ್ಷಣಗಳಿಲ್ಲ. ಆದರೂ ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ ಎಂದು ಹೇಳಿರುವ ಬಿಎಸ್ವೈ, ಆಸ್ಪತ್ರೆ ಬೆಡ್ ಮಲಗಿ ವಿಶ್ರಾಂತಿ ಪಡೆಯುವ ಬದಲು ತುರ್ತು ಕೆಲಸಗಳಲ್ಲಿ ತೊಡಗಿದ್ದಾರೆ.
ಮಣಿಪಾಲ್ ಆಸ್ಪತ್ರೆಯ ಯೂನಿಫಾರ್ಂ ತೊಟ್ಟ ಸಿಎಂ ಬಿಎಸ್ವೈ ಕೈಗೆ ಬ್ಯಾಂಡೆಜ್ ಹಾಕಿಕೊಂಡೇ ಅತಿ ಅಗತ್ಯವಾದ ಆಡಳಿತದ ಫೈಲ್ ಗಳನ್ನು ಪರಿಶೀಲಿಸುವುದು ಹಾಗೂ ಸೈನ್ ಹಾಕುವ ಕೆಲಸದಲ್ಲಿ ನಿರತರಾಗಿದ್ದಾರೆ.
ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಿಎಂ ಯಡಿಯೂರಪ್ಪ ನವರ ಡೆಡಿಕೇಶನ್’ಗೆ ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದೆ.
ಮೂಲಗಳ ಮಾಹಿತಿ ಪ್ರಕಾರ, ವೃದ್ಧಾಪ್ಯದ ಅಂಚಿನಲ್ಲಿದ್ದರೂ ಬಿಎಸ್ವೈ ಕೊರೋನಾಗೆ ಕೊಂಚವೂ ಹೆದರದೇ ತಮ್ಮ ದೈನಂದಿನ ಚಟುವಟಿಕೆಗಳನ್ನ ನಡೆಸುತ್ತಿದ್ದಾರಂತೆ.
ಬೆಳಗ್ಗೆ ಆಸ್ಪತ್ರೆಯಲ್ಲೇ ವಾಕಿಂಗ್ ಮಾಡಿದ ಬಿಎಸ್ವೈ ಬಳಿಕ ಮನೆಯಿಂದ ತರಲಾದ ಉಪಾಹಾರ ಸೇವಿಸಿ, ಕೆಲಕಾಲ ಟಿವಿ, ನ್ಯೂಸ್ ಪೇಪರ್ ಗಮನಿಸಿದ್ದಾರಂತೆ. ಬಳಿಕ ಪುಸ್ತಕ ಓದಿದ ಅವರು ಮಧ್ಯಾಹ್ನದ ಬಳಿಕ ಅಧಿಕಾರಿಗಳ ಜತೆ ವಿಡಿಯೋ ಕಾನ್ಪರೆನ್ಸ್ ನಡೆಸಿ ಅಗತ್ಯ ಸೂಚನೆ ನೀಡಿದ್ದಾರಂತೆ. ಅಷ್ಟೇ ಅಲ್ಲ, ವೈದ್ಯರು ಹೇಳಿದ್ದರೂ ಕೇಳದೇ ಅಗತ್ಯ ಕಡತಗಳ ವಿಲೇವಾರಿ ಯಲ್ಲಿ ಬ್ಯುಸಿಯಾಗಿ ಮಣಿಪಾಲ್ ಆಸ್ಪತ್ರೆಯನ್ನೇ ತುರ್ತು ಸಿಎಂ ಕಚೇರಿಯಾಗಿ ಬದಲಾಯಿಸಿದ್ದಾರಂತೆ.