ಉಡುಪಿ/ಬೆಂಗಳೂರು: ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಗಳ ಆರೋಗ್ಯ ಕ್ಷಣಕ್ಷಣಕ್ಕೂ ಕ್ಷೀಣಿಸುತ್ತಿದ್ದು, ಶ್ರೀಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡ ಹೇಳಿದೆ.
ಎಂಆರ್ಐ ಸ್ಕ್ಯಾನ್ ಮಾಡಲಾಗಿದ್ದು, ಅದರ ವರದಿ ಬಂದ ಬಳಿಕ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡುವುದಾಗಿ ಕೆಎಂಸಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಶ್ರೀಗಳ ಆರೋಗ್ಯ ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಡುಪಿಗೆ ತೆರಳುತ್ತಿದ್ದಾರೆ. ಈಗಾಗಲೇ ವೈದ್ಯರೊಂದಿಗೆ ಶ್ರೀಗಳ ಆರೋಗ್ಯ ಸ್ಥಿತಿಯ ಬಗ್ಗೆ ಸಿಎಂ ವಿಚಾರಿಸಿದ್ದಾರೆ.
ಪೇಜಾವರ ಶ್ರೀಗಳ ಆರೋಗ್ಯ ವಿಷಮಿಸುತ್ತಿರುವ ಹಿನ್ನೆಲೆಯಲ್ಲಿ ಗಣ್ಯರಿಗೆ ಶ್ರೀಗಳ ಭೇಟಿಯನ್ನು ರದ್ದುಗೊಳಿಸಿರುವುದಾಗಿ ಕೆಎಂಸಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಶ್ರೀಗಳ ಸ್ಥಿತಿ ವಿಷಮಿಸುತ್ತಿರುವುದರಿಂದ ಭಕ್ತರು ಆತಂಕಗೊಂಡಿದ್ದಾರೆ. ಸ್ವಾಮೀಜಿಯವರ ಆರೋಗ್ಯ ಚೇತರಿಕೆಗೆ ಭಕ್ತರು ವಿಶೇಷ ಪೂಜೆ ಹಾಗೂ ಪ್ರಾರ್ಥನೆಯಲ್ಲಿ ತೊಡಗಿದ್ದಾರೆ.