ಜಮ್ಮು: ಕೋಡ್ವರ್ಡ್ ರೀತಿಯ ಸಂದೇಶವಿದ್ದ ರಿಂಗ್ ಹೊಂದಿದ್ದ ಪಾರಿವಾಳವೊಂದನ್ನು ಜಮ್ಮು ಮತ್ತು ಕಾಶ್ಮೀರದ ಖತುವಾ ಜಿಲ್ಲೆ ಬಳಿ ಸೋಮವಾರ ಸೆರೆ ಹಿಡಿಯಲಾಗಿದೆ.
ಈ ಪಾರಿವಾಳವನ್ನು ಖತುವಾ ಜಿಲ್ಲೆಯ ಮಾನ್ಯಾರಿ ಗ್ರಾಮದ ಜನರು ಗುರುತಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಪಾರಿವಾಳದ ದೇಹದ ಮೇಲ್ಮೈ ಭಾಗದಲ್ಲಿ ಬಣ್ಣದ ಗುರುತುಗಳು ಕಂಡುಬಂದಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶೈಲೇಂದ್ರ ಮಿಶ್ರಾ ತಿಳಿಸಿದ್ದಾರೆ.
ಕಪ್ಪು-ಬಿಳಿ ಹಾಗೂ ರೆಕ್ಕೆಗಳ ಮೇಲೆ ಗುಲಾಬಿ ಬಣ್ಣ ಹೊಂದಿರುವ ಈ ಪಾರಿವಾಳ ಪಾಕಿಸ್ತಾನದ ಕಡೆಯಿಂದ ಬಂದಿದ್ದು, ಅಂತಾರಾಷ್ಟ್ರೀಯ ಗಡಿಯ ಬಳಿ ಹಾರಾಡುತ್ತಿತ್ತು. ಬೇಹುಗಾರಿಕೆ ನಡೆಸಲು ಪಾಕಿಸ್ತಾನ ಕಡೆಯಿಂದ ಪಾರಿವಾಳವನ್ನು ಭಾರತದ ಗಡಿ ಭಾಗಕ್ಕೆ ಬಿಟ್ಟಿರಬಹುದು ಎಂದು ಶಂಕಿಸಲಾಗಿದೆ. ಹೀಗಾಗಿ ಪಾರಿವಾಳವನ್ನು ಮತ್ತಷ್ಟು ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.