ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ನಲ್ಲಿ ಕಾರ್ಗಿಲ್ ವಿಜಯ ದಿವಸ ಮತ್ತು ಕೊರೋನಾ ವಿರುದ್ದದ ಹೋರಾಟದ ಬಗ್ಗೆ ಪ್ರಸ್ತಾಪಿಸಿದರು. ಹುತಾತ್ಮ ಯೋಧರ ಬಲಿದಾನವನ್ನು ಅವರು ಸ್ಮರಿಸಿದರು. ಭಾರತ ಸದಾ ಶಾಂತಿ ಬಯಸುತ್ತದೆ. ಆದರೆ ದೇಶದ ಮೇಲೆ ಆತಿಕ್ರಮಣ ಮಾಡಿದರೆ ಅದನ್ನು ಹಿಮ್ಮೆಟ್ಟಿಸಿ ದೇಶದ ಏಕತೆ ಮತ್ತು ಸಮಗ್ರತೆ ರಕ್ಷಿಸಲಾಗುವುದು ಎಂದು ಪ್ರಧಾನಿ ಗುಡುಗಿದರು.
ಕೊರೋನಾ ಮಹಾಮಾರಿಯ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಇದರ ವಿರುದ್ದ ನಿರಂತರ ಹೋರಾಟ ಅನಿವಾರ್ಯ ಎಂದು ಹೇಳಿದರು. ದೇಶದ ಜನರು ಈ ಹೋರಾಟದಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಪ್ರಧಾನಿ ಹೇಳಿದರು. ದೇಶದ ಸ್ವಯಂ ಸೇವಾ ಸಂಸ್ಥೆಗಳು ಮತ್ತು ನಾಗರಿಕರು ಈ ಅಭಿಯಾನದಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಪ್ರಧಾನಿ ಪ್ರಸ್ತಾಪಿಸಿದರು.
ಬಿಹಾರದ ಮಧುಬನಿ ಮಾಸ್ಕ್ ತಯಾರಿ ಬಗ್ಗೆ ಪ್ರಧಾನಿ ಮೆಚ್ಚುಗೆಯ ಮಾತನ್ನಾಡಿದರು. ಅದೇ ರೀತಿ ಮಣಿಪುರ ಸೇರಿದಂತೆ ದೇಶದ ಈಶಾನ್ಯ ರಾಜ್ಯಗಳಲ್ಲಿ ಬಿದಿರಿನಿಂದ ಟಿಫಿನ್ ಬಾಕ್ಸ್ ಮತ್ತು ನೀರಿನ ಬಾಟಲ್ ನಿರ್ಮಾಣದ ಬಗ್ಗೆ ಕೂಡ ಪ್ರಧಾನಿ ಮಾಹಿತಿ ನೀಡಿದರು.
ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಪ್ರದರ್ಶಿಸಿದ ವಿದ್ಯಾರ್ಥಿಗಳ ಜತೆ ಪ್ರಧಾನಿ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಅವರ ಅಭಿರುಚಿ ಮತ್ತು ಸಾಧನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಸಾಧನೆ ತೋರಿದ ಎಲ್ಲ ವಿದ್ಯಾರ್ಥಿಗಳು ಇತರರಿಗೆ ಮಾದರಿಯಾಗಿದ್ದಾರೆ ಎಂದು ಪ್ರಧಾನಿ ಹೇಳಿದರು.