* ಉಡುಪಿಯಲ್ಲಿ ಅಘೋಷಿತ ಬಂದ್ ವಾತಾವರಣ
ಉಡುಪಿ: ಮಠಕ್ಕೆ ಮರಳಿದ ಪೇಜಾವರ ಶ್ರೀಗಳ ದರ್ಶನಕ್ಕೆ ಗಣ್ಯರು, ಭಕ್ತರು ಭಾರೀ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ನಿತ್ಯ ಆಸ್ಥಾನ ಪೂಜೆ ನಡೆಯುವ ಸ್ಥಳದ ಸಮೀಪದಲ್ಲಿರುವ ಅವರ ಕೋಣೆಯಲ್ಲೇ ಪೇಜಾವರ ಶ್ರೀಗಳಿಗೆ ವೆಂಟಿಲೇಟರ್ ಅಳವಡಿಸಲಾಗಿದ್ದು, ಆರು ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ.
ಈ ಮಧ್ಯೆ, ಶ್ರೀಗಳ ಚೇತರಿಕೆಗೆ ಪ್ರಾರ್ಥಿಸಿ ಉಡುಪಿ ಕೃಷ್ಣ ಮಠದಲ್ಲಿ ವಿಷ್ಣುಸಹಸ್ರನಾಮ ಪಾರಾಯಣ ನಡೆಸಲಾಗುತ್ತಿದೆ. ರಾಜ್ಯದ ವಿವಿಧೆಡೆ ಭಕ್ತರು ಶ್ರೀಗಳು ಶೀಘ್ರ ಗುಣಮುಖರಾಗಲೆಂದು ಪೂಜೆ ಸಲ್ಲಿಸುತ್ತಿದ್ದಾರೆ.
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸೋದೆ, ಅದಮಾರು, ಪಲಿಮಾರು, ಕಾಣಿಯೂರು, ರಾಮಚಂದ್ರಾಪುರ ಮಠದ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು ಪೇಜಾವರ ಶ್ರೀಗಳ ದರ್ಶನ ಪಡೆದರು. ಸ್ವಲ್ಪ ಹೊತ್ತಿನಲ್ಲಿ ಸಿಎಂ ಯಡಿಯೂರಪ್ಪ ದರ್ಶನ ಪಡೆಯಲಿದ್ದಾರೆ.
ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ವಿಷಮಿಸುತ್ತಲೇ ಇದ್ದು, ಕೃಷ್ಣಮಠ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಎಲ್ಲರಲ್ಲೂ ದುಃಖ ಮಡುಗಟ್ಟಿದೆ. ಉಡುಪಿಯಾದ್ಯಂತ ಅಘೋಷಿತ ಬಂದ್ ವಾತಾವರಣವಿದೆ.