newsics.com
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಗೆ ಸಿದ್ಧತೆಗಳು ಪೂರ್ಣಗೊಂಡಿವೆ. ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆ, ಕಲಾತಂಡ, ಹಾಗೂ ಸ್ತಬ್ಧಚಿತ್ರಗಳು ಸನ್ನದ್ಧವಾಗಿವೆ. ಶುಕ್ರವಾರ ಸಂಜೆ 4.36 ರಿಂದ 4.46 ರೊಳಗೆ ಸಲ್ಲುವ ಮೀನ ಲಗ್ನದಲ್ಲಿ ಮುಖ್ಯಮಂತ್ರಿಗಳು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವರು. ಸಂಜೆ 5 ರಿಂದ 5.30ರೊಳಗೆ ಜಂಬೂಸವಾರಿ ಮೆರವಣಿಗೆಗೆ ಚಾಲನೆ ದೊರೆಯಲಿದೆ.
ಅಂಬಾರಿ ಹೊರಲಿರುವ ಅಭಿಮನ್ಯುವಿನ ಎಡ ಹಾಗೂ ಬಲದಲ್ಲಿ ಕುಮ್ಕಿ ಆನೆಗಳಾದ ಕಾವೇರಿ ಹಾಗೂ ಚೈತ್ರಾ ಆನೆಗಳು ಹೆಜ್ಜೆ ಹಾಕಲಿವೆ.
ಅರಮನೆ ಬಲಬದಿಯಲ್ಲಿ ಅಂಬಾರಿ ಕಟ್ಟುವ ಜಾಗದಿಂದ ವರಾಹ ದ್ವಾರಕ್ಕೆ ಗಜಪಡೆ ಬರಲಿದ್ದು, ಬಳಿಕ ಪುಷ್ಪಾರ್ಚನೆಗೆ ಅರಮನೆ ಮುಂಭಾಗ ನಿಂತು ಬಲರಾಮ ದ್ವಾರದ ಕಡೆ ತೆರಳಲಿವೆ. ಅಲ್ಲಿಂದ ಎಡಕ್ಕೆ ತಿರುವು ಪಡೆದು ಅಂಬಾರಿ ಕಟ್ಟುವ ಜಾಗಕ್ಕೆ ತೆರಳಲಿದ್ದು, ಒಂದು ತಾಸಿನಲ್ಲಿ ಮೆರವಣಿಗೆ ಮುಕ್ತಾಯಗೊಳ್ಳಲಿದೆ. ಈ ಬಾರಿ ಜಂಬೂಸವಾರಿಯಲ್ಲಿ 13 ಕಲಾತಂಡಗಳು ಪಾಲ್ಗೊಳ್ಳಲಿವೆ.
ಈ ಮಧ್ಯೆ, ಶುಕ್ರವಾರ ನಡೆಯಲಿರುವ ಜಂಬೂಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿ ಹೊತ್ತು ಸಾಗಲು ಅಭಿಮನ್ಯು ಫಿಟ್ ಆಗಿದ್ದಾನೆ ಎಂದು ಡಿಸಿಎಫ್ ಕರಿಕಾಳನ್ ಹೇಳಿದ್ದಾರೆ.