Friday, May 20, 2022

ಮೋದಿ @ 70

Follow Us

ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ. ಯಾರೇ ಅವರನ್ನು ದ್ವೇಷಿಸಲಿ, ದೇಶದ ಮಟ್ಟಿಗೆ ಅವರ ಬದ್ಧತೆಯನ್ನು ಪ್ರಶ್ನಿಸುವುದು ಕಷ್ಟ. ಜನಸಾಮಾನ್ಯರಿಗೂ ಮೋದಿ ಮೇಲೆ ಅದೇನೂ ಭರವಸೆ. ಅಂಥ ನಾಯಕನಿಗೆ ಇಂದು 70 ವರ್ಷದ ಸಂಭ್ರಮ.
 
newsics.com Feature Desk


 ವಿ ಶ್ವದ ಮುಂಚೂಣಿ ನಾಯಕರಲ್ಲಿ ಮಹತ್ವದ ಸ್ಥಾನ ಪಡೆದಿರುವ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು (ಸೆ.17) ಜನ್ಮದಿನದ ಸಂಭ್ರಮ. 70 ವರ್ಷಕ್ಕೆ ಕಾಲಿಡುತ್ತಿದ್ದಾರೆ ಎಂದರೆ ಅಚ್ಚರಿಯಾಗುತ್ತದೆ. ಅಷ್ಟು ವಯಸ್ಸಾದ ಕುರುಹೇ ಅವರಿಗಿಲ್ಲವಲ್ಲ ಎಂದು ಯಾರಾದರೂ ಒಮ್ಮೆಯಾದರೂ ಅಂದುಕೊಳ್ಳಲೇಬೇಕು, ಹಾಗಿದೆ ಅವರ ಚಟುವಟಿಕೆ, ದೇಹಸೌಷ್ಟವ ಹಾಗೂ ಮನಸ್ಸಿನ ಲವಲವಿಕೆ.
ಮೋದಿ ಸ್ಥಿತಪ್ರಜ್ಞತೆಗೆ ಮತ್ತೊಂದು ಹೆಸರು. ಅವರನ್ನು ದ್ವೇಷಿಸುವವರು ಸಹ ಈ ಸ್ಥಿತಪ್ರಜ್ಞತೆಗೆ ತಲೆದೂಗಿದ್ದಾರೆ. ಅಂದ ಹಾಗೆ, ಮೋದಿ ನಮ್ಮ ನಿಮ್ಮೆಲ್ಲರ ಹಾಗೆ ಸಾಮಾನ್ಯ ಬಾಲ್ಯವನ್ನು ಕಳೆದವರು. ಅದೂ ಅತ್ಯಂತ ಬಡತನದಿಂದ ಕೂಡಿದ್ದ ಬಾಲ್ಯ ಅದಾಗಿತ್ತು. ಆದರೆ, ಅಂದೂ ಮೋದಿಯ ಕುಶಾಗ್ರಮತಿ ಆಗಾಗ ಬಿಂಬಿತವಾಗುತ್ತಲೇ ಇರುತ್ತಿತ್ತು. ಅವರ ಕುರಿತು ಬಲ್ಲವರು ಆಡಿದ ಮಾತುಗಳು, ಅವರೇ ಕೆಲವೊಮ್ಮೆ ಹಂಚಿಕೊಂಡ ಸನ್ನಿವೇಶಗಳ ಮೂಲಕ ಅವರ ಬಾಲ್ಯದ ಕೆಲವು ಕುತೂಹಲಕಾರಿ ಘಟನೆಗಳ ಬಗ್ಗೆ ತಿಳಿಯಬಹುದು.
1950ರ ಸೆಪ್ಟೆಂಬರ್ 17ರಂದು ಬಡ, ತೆಲಿ ಗಾಂಗ್ಚಿ ಎನ್ನುವ ಸಮುದಾಯದಲ್ಲಿ ಗುಜರಾತಿನ ವಡ್ ನಗರದಲ್ಲಿ ದಾಮೋದರದಾಸ್ ಮುಲ್’ಚಂದ್ ಮೋದಿ ಹಾಗೂ ಹೀರಾಬೆನ್ ಮೋದಿ ಅವರ ಪುತ್ರನಾಗಿ ಜನಿಸಿದರು. ಬಡತನದಲ್ಲೇ ಬೆಳೆದರೂ ಅನೇಕ ನಾಯಕತ್ವದ ಗುಣಗಳನ್ನು ಮೋದಿ ಅವರಲ್ಲಿ ಬಾಲ್ಯದಲ್ಲೇ ಕಾಣಬಹುದಾಗಿತ್ತು.
ಕಬಡ್ಡಿ ಪಂದ್ಯ
ವಡ್ ನಗರದ ಬಿ.ಎನ್. ಹೈಸ್ಕೂಲ್’ನಲ್ಲಿ ಮೋದಿ ವಿದ್ಯಾಭ್ಯಾಸ ಮಾಡುತ್ತಿರುವಾಗ ಅಂತರ ಶಾಲೆಗಳ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಅವರಿದ್ದ ತಂಡದಲ್ಲಿ ಕಿರಿಯರೇ ಹೆಚ್ಚು ತುಂಬಿದ್ದರು. ಇನ್ನೊಂದು ಶಾಲೆಯ ತಂಡದಲ್ಲಿ ದೊಡ್ಡ ಮಕ್ಕಳೇ ಹೆಚ್ಚಾಗಿದ್ದರು ಹಾಗೂ ಬಲಿಷ್ಠವಾಗಿದ್ದರು. ಅವರಿಗೆ ಕಬಡ್ಡಿಯ ಬಗ್ಗೆ ಹೆಚ್ಚಿನ ತಂತ್ರವೂ ತಿಳಿದಿತ್ತು. ತಾವೇ ಗೆಲ್ಲುವಂತಾಗಲು ಏನಾದರೂ ಉಪಾಯ ಕಂಡುಹಿಡಿಯಬೇಕು ಎಂದು ಮೋದಿ ತಂಡದ ಸದಸ್ಯರು ಮೋದಿಗೆ ಹೇಳಿದಾಗ ಅವರು ಎದುರಾಳಿ ಪಂದ್ಯದ ಗೆಲುವಿನ ತಂತ್ರಗಳನ್ನು ಅರಿತುಕೊಂಡರು. ತಮ್ಮ ತಂಡದ ಸದಸ್ಯರಿಗೂ ಅವುಗಳನ್ನು ಅಭ್ಯಾಸ ಮಾಡಿಸಿದರು. ಕೊನೆಗೆ, ಮೋದಿ ತಂಡವೇ ವಿಜಯಿಯಾಗಿತ್ತು.
ಪೀಲೂ ಫೂಲ್
ಇದೊಂದು ನಾಟಕ. ಶಾಲಾ ದಿನಗಳಲ್ಲಿ ಮೋದಿಯೇ ಬರೆದು, ಪ್ರದರ್ಶಿಸಿದ್ದ ನಾಟಕ ಇದು. ಮೋದಿ ಈ ನಾಟಕ ಬರೆಯಲು ಘಟನೆಯೊಂದು ಪ್ರೇರಣೆಯಾಗಿತ್ತು. ಜಾತಿಯ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳಿಗೆ ದೇವಾಲಯ ಪ್ರವೇಶಿಸಲು ಅನುಮತಿ ನೀಡದ ಘಟನೆಯೊಂದರ ಹಿನ್ನೆಲೆಯಲ್ಲಿ ಈ ನಾಟಕ ಬರೆದಿದ್ದರು. ಇದರಲ್ಲಿ ಆ ಮಹಿಳೆ ಅತ್ಯುನ್ನತ ಸಾಧನೆ ಮಾಡಿರುವುದನ್ನು ಚಿತ್ರಿಸಿದ್ದರು. ಸ್ವತಃ ತಳಸಮುದಾಯದಿಂದ ಬಂದ ಮೋದಿ ಅವರಿಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆ ಆಗಲೇ ಇತ್ತು ಎನ್ನುವುದು ಇದರಿಂದ ವೇದ್ಯವಾಗುತ್ತದೆ.
ಮೊಸಳೆಗಳೊಂದಿಗೆ ಆಟ!
ಬಾಲ್ಯದಲ್ಲೇ ಮೋದಿ ಸಾಕಷ್ಟು ಧೈರ್ಯವಂತರಾಗಿದ್ದರು. ಒಮ್ಮೆ ಅವರು ಮೊಸಳೆ ಮರಿಯೊಂದನ್ನು ಮನೆಗೆ ತಂದುಬಿಟ್ಟಿದ್ದರು. ಬಳಿಕ ತಾಯಿ ಹೀರಾಬೆನ್ ಅವರು ತಿಳಿಹೇಳಿದ ಬಳಿಕ ವಾಪಸ್ ನದಿಗೆ ಬಿಟ್ಟು ಬಂದಿದ್ದರು. ಇನ್ನೊಮ್ಮೆ, ಬಾಯಿಯಲ್ಲಿ ಕತ್ತರಿಯನ್ನು ಇಟ್ಟುಕೊಂಡು ಮರವೇರಿದ್ದರು. ಮರದಲ್ಲಿ ಗಾಳಿಪಟದ ದಾರಕ್ಕೆ ಸಿಲುಕಿದ್ದ ಪಕ್ಷಿಯನ್ನು ಬಿಡಿಸುವ ಪ್ರಯತ್ನ ಅವರದ್ದಾಗಿತ್ತು. ಇಂಥ ಧೈರ್ಯವನ್ನು ಈಗಲೂ ಅವರಲ್ಲಿ ಕಾಣುತ್ತಲೇ ಇರಬಹುದು. ಸರ್ಜಿಕಲ್ ಸ್ಟೈಕ್ ಸೇರಿದಂತೆ ದೇಶಕ್ಕೆ ಸಂಬಂಧಿಸಿದ ಹಲವು ನಿರ್ಧಾರಗಳಲ್ಲಿ ಅವರ ಧೈರ್ಯ ಪದೇ ಪದೇ ವ್ಯಕ್ತವಾಗುತ್ತಲೇ ಇದೆ.
ಮಹತ್ವಾಕಾಂಕ್ಷೆಯುಳ್ಳ ಬಾಲಕ
ಬಡತನದಲ್ಲೇ ಬೆಳೆದರೂ ಮೋದಿ ಮಹತ್ವಾಕಾಂಕ್ಷೆಯುಳ್ಳವರಾಗಿದ್ದರು. ತಮ್ಮ ಬಟ್ಟೆಯನ್ನು ಅತ್ಯಂತ ನೀಟಾಗಿ ಇರಿಸಿಕೊಳ್ಳುತ್ತಿದ್ದರು. ಶಾಲೆಯಲ್ಲಿ ಬಳಸಿ ಬಿಸಾಡಿದ ಚಾಕ್ ಪೀಸ್’ಳನ್ನು ತಂದು ಸಂಬಂಧಿಯೊಬ್ಬರು ಉಡುಗೊರೆ ನೀಡಿದ್ದ ಕ್ಯಾನ್ವಾಸ್ ಶೂಗಳ ಮೇಲೆ ಉಜ್ಜಿ ಬಿಳಿದಾಗಿ ಮಾಡಿಕೊಳ್ಳುತ್ತಿದ್ದರು. ಪ್ರತಿದಿನ ರಾತ್ರಿ ಮಲಗುವಾಗ ಮಾರನೆಯ ದಿನದ ಯೂನಿಫಾರಂ ಅನ್ನು ದಿಂಬಿನಡಿ ಸರಿಯಾಗಿ ಮಡಸಿಕೊಂಡು ಇರಿಸಿಕೊಂಡು, ತಮ್ಮದೇ ವಿಧಾನದಲ್ಲಿ ಐರನ್ ಮಾಡಿಕೊಳ್ಳುತ್ತಿದ್ದರು! ಮೋದಿ ಅವರ ಬಟ್ಟೆಯ ಪ್ರೀತಿ ಈಗಲೂ ವ್ಯಕ್ತವಾಗುವಂಥದ್ದು.
ರೈಲ್ವೆ ಸ್ಟೇಷನ್ನತಲ್ಲಿ ಬದುಕು
ವಡ್ ನಗರ ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದ ತಂದೆಯವರಿಗೆ ಮೋದಿ ನೆರವಾಗುತ್ತಿದ್ದರು, ಶಾಲೆ ಮುಗಿಸಿ ಬಂದ ಬಳಿಕ ಚಹಾ ಮಾರುತ್ತ ಕುಟುಂಬಕ್ಕೆ ನೆರವಾಗುತ್ತಿದ್ದರು. ತಮ್ಮ ಈ ಬದುಕಿನ ಕುರಿತು ಅವರು ಹಲವು ಬಾರಿ ಹಂಚಿಕೊಂಡಿದ್ದಾರೆ.
ಅಧ್ಯಾತ್ಮದ ಸೆಳೆತ
ಯುವಕನಾದ ಬಳಿಕ ಸ್ವಾಮಿ ವಿವೇಕಾನಂದ ಅವರ ಕೃತಿಗಳಿಂದ ಸ್ಫೂರ್ತಿಯಾಗಿ ಅಧ್ಯಾತ್ಮದ ಸೆಳೆತಕ್ಕೆ ಒಳಗಾಗಿದ್ದ ಮೋದಿ ಆ ಸಮಯದಲ್ಲೇ ಮನೆ ಬಿಟ್ಟು ನಡೆದಿದ್ದರು. ತಮ್ಮ 17ನೇ ವಯಸ್ಸಿನಲ್ಲಿ ಬೇಲೂರು ಮಠಕ್ಕೆ ಭೇಟಿ ನೀಡಿದ್ದ ಮೋದಿ ಅವರಿಗೆ ಸ್ವಾಮಿ ಮಾಧವಾನಂದ ಅವರನ್ನು ಭೇಟಿಯಾಗುವ ಸುಯೋಗ ಒದಗಿತ್ತು. ಮುಂದಿನ ಎರಡು ವರ್ಷಗಳ ಕಾಲ ಹಿಮಾಲಯದ ಗುಹೆಗಳಲ್ಲಿ ಸನ್ಯಾಸಿಯಂತೆ ಜೀವನ ಮಾಡಿದ್ದರು. ದೇವರ ಹುಡುಕಾಟದಲ್ಲಿದ್ದ ಅವರಿಗೆ ಸನ್ಯಾಸಿಯೊಬ್ಬರು ತಿಳಿವಳಿಕೆ ಹೇಳಿದ್ದರು. ದೇವರನ್ನು ಹಿಮಾಲಯದಲ್ಲಿ ಹುಡುಕಾಡಬೇಕಿಲ್ಲ, ಜನರ ಹಾಗೂ ಸಮಾಜದ ಸೇವೆ ಮಾಡಿದರೆ ದೇವರನ್ನು ಕಾಣಬಹುದು ಎಂದು ಹೇಳಿದ್ದರು. ಆಗ ಮೋದಿ ಸಮಾಜಕ್ಕೆ ವಾಪಸಾದರು. ಆದರೆ, ಕುಟುಂಬ ಜೀವನಕ್ಕೆ ಮರಳಲಿಲ್ಲ. ತಾವು ಹಿಮಾಲಯದ ಬದುಕಿನಲ್ಲಿ ಪಡೆದ ಶಕ್ತಿ ಇನ್ನೂ ತಮ್ಮೊಳಗೆ ಇದೆ ಎಂಬುದಾಗಿ ಸ್ವತಃ ಮೋದಿ ಅವರೇ “ಮ್ಯಾನ್ ವರ್ಸಸ್ ವೈಲ್ಡ್’ ಕಾರ್ಯಕ್ರಮದ ಸಮಯದಲ್ಲಿ ಹೇಳಿಕೊಂಡಿದ್ದರು.

ಮತ್ತಷ್ಟು ಸುದ್ದಿಗಳು

Latest News

ಮಾತುಗಾರರ ಶೋಧಕ್ಕೆ ಮುಂದಾದ ಕಾಂಗ್ರೆಸ್‌ನಿಂದ ಭಾಷಣ ಸ್ಪರ್ಧೆ: ವಿಜೇತರಿಗೆ ಐಫೋನ್ ಬಹುಮಾನ

newsics.com ಬೆಂಗಳೂರು: ಯುವ ಮಾತುಗಾರರ ಶೋಧಕ್ಕೆ ಮುಂದಾಗಿರುವ ಕಾಂಗ್ರೆಸ್, ಇದಕ್ಕಾಗಿ ಭಾಷಣ ಸ್ಪರ್ಧೆಯನ್ನು ಆಯೋಜಿಸಿದೆ. ರಾಜ್ಯಮಟ್ಟದ ಈ ಭಾಷಣ ಸ್ಪರ್ಧೆಯಲ್ಲಿ ಗೆಲ್ಲುವ ಮಾತುಗಾರರಿಗೆ ಐಫೋನ್ ಸಿಗಲಿದೆ. ಅಷ್ಟೇ ಅಲ್ಲ,...

ಹಳ್ಳದಲ್ಲಿ ಕೊಚ್ಚಿಹೋಗುತ್ತಿದ್ದ ಕಾರು, ನಾಲ್ವರನ್ನು ರಕ್ಷಿಸಿದ ಗ್ರಾಮಸ್ಥರು

newsics.com ಗದಗ: ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದಾಗಿ ಹಳ್ಳದಲ್ಲಿ ಕೊಚ್ಚಿಹೋಗುತ್ತಿದ್ದ ಕಾರು ಹಾಗೂ ಅದರಲ್ಲಿದ್ದ ನಾಲ್ವರನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕುನ ನೆಲೋಗಲ್ ಗ್ರಾಮದ ಬಳಿ ಶುಕ್ರವಾರ ಈ ಘಟನೆ ನಡೆದಿದೆ. ನಿರಂತರ ಮಳೆಯಿಂದಾಗಿ ನೆಲೋಗಲ್-ಬೆಳ್ಳಟ್ಟಿ...

ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಮಾಡಿದ್ದ ವ್ಯಕ್ತಿ‌ ಬಂಧನ

newsics.com ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ ಮಾಡಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿ ಸುಭಾಷ್ ಗುಪ್ತನನ್ನು ಪೊಲೀಸರು ಬಂಧಿಸಿದ್ದಾರೆ. ಭಾವನ ಮೇಲೆ ಸೇಡು ತೀರಿಸಿಕೊಳ್ಳಲು ಬೆದರಿಕೆ ಕರೆ ಮಾಡಿದ್ದ ಸುಭಾಷ್, ವಿಚ್ಛೇದಿತ...
- Advertisement -
error: Content is protected !!