ಬೆಂಗಳೂರು: ಕೊರೋನಾ ವಾರಿಯರ್ ಸರ್ಕಾರಿ ವೈದ್ಯರೊಬ್ಬರಿಗೆ ನಗರದ ಮೂರು ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸಿದ ಪರಿಣಾಮವಾಗಿ ವೈದ್ಯರು ಬುಧವಾರ (ಜುಲೈ 23) ಕೊನೆಯುಸಿರೆಳೆದಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಕೊರೋನಾ ಪರೀಕ್ಷಾ ವರದಿ ಇಲ್ಲ ಎಂಬ ಏಕೈಕ ಕಾರಣಕ್ಕೆ ಈ ಮೂರೂ ಆಸ್ಪತ್ರೆಗಳು ಸರ್ಕಾರಿ ವೈದ್ಯರಿಗೆ ಚಿಕಿತ್ಸೆ ನೀಡಲು ನಿರಾಕರಿಸಿವೆ. ಚಿಕಿತ್ಸೆ ಸಿಗದ್ದಕ್ಕೆ 20 ದಿನದಿಂದ ಪ್ರಜ್ಞಾಶೂನ್ಯರಾಗಿದ್ದ ವೈದ್ಯರು ಮೃತಪಟ್ಟಿದ್ದಾರೆ.
ರಾಮನಗರ ಜಿಲ್ಲೆಯ ಸರ್ಕಾರಿ ವೈದ್ಯ ಮಂಜುನಾಥ್ (50) ಮೃತಪಟ್ಟವರು. ಬೆಂಗಳೂರಿನವರಾದ ಅವರು ಕಳೆದ ಐದು ವರ್ಷದಿಂದ ಕನಕಪುರ ತಾಲೂಕಿನ ಚಿಕ್ಕಮುದುವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.
ತಿಂಗಳ ಹಿಂದೆ ಅವರಿಗೆ ಕೋವಿಡ್ ಸೋಂಕು ತಗುಲಿತ್ತು. ಅವರು 20 ದಿನದ ಹಿಂದೆಯೇ ಪ್ರಜ್ಞಾಶೂನ್ಯರಾಗಿದ್ದರು.
ಆರೋಗ್ಯ ಇಲಾಖೆ ವಿಳಂಬ, ತಪ್ಪು ಮಾಹಿತಿಗೆ ಜೀವ ತೆತ್ತ ‘ಕೊರೋನಾ ಇಲ್ಲದ’ ಆಟೋ ಡ್ರೈವರ್!
ಕೊರೋನಾ ಕರ್ತವ್ಯದಲ್ಲಿದ್ದ ಡಾ.ಮಂಜುನಾಥ ಕಳೆದೊಂದು ತಿಂಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಈ ವೇಳೆ ಅವರು ಚಿಕಿತ್ಸೆಗಾಗಿ ನಗರದ ಮೂರು ಖಾಸಗಿ ಆಸ್ಪತ್ರೆಯನ್ನು ಸಂಪರ್ಕಿಸಿದ್ದರು. ಆದರೆ ಅವರ ಬಳಿ ಕೊರೋನಾ ಟೆಸ್ಟ್ ರಿಪೋರ್ಟ್ ಇರಲಿಲ್ಲ ಎಂಬ ಕಾರಣಕ್ಕೆ ಅವರಿಗೆ ಚಿಕಿತ್ಸೆ ನಿರಾಕರಿಸಲಾಯಿತು ಎಂದು ಎನ್ಡಿಟಿವಿ ವರದಿ ಹೇಳಿದೆ. ಕೊನೆಗೆ ಡಾ.ಮಂಜುನಾಥ್ ಕುಟುಂಬಸ್ಥರು ಪ್ರತಿಭಟನೆ ನಡೆಸಿದ ಬಳಿಕ ಅವರನ್ನು ಸಾಗರ ಹಾಸ್ಪಿಟಲ್ಗೆ ದಾಖಲಿಸಿದರು. ನಂತರ ಅವರನ್ನು ಬೆಂಗಳೂರು ಮೆಡಿಕಲ್ ಹಾಗೂ ರಿಸರ್ಚ ಇನ್ಸ್ಟಿಟ್ಯೂಟ್ಗೆ ಶಿಫ್ಟ್ ಮಾಡಲಾಗಿತ್ತು. ಅಲ್ಲಿಯೇ ಡಾ.ಮಂಜುನಾಥ್ ಕೊನೆಯುಸಿರೆಳೆದಿದ್ದಾರೆ.
ಬೆಂಗಳೂರಿನಲ್ಲಿ 2,207, ರಾಜ್ಯದಲ್ಲಿ 5,030 ಜನರಿಗೆ ಸೋಂಕು; 97 ಮಂದಿ ಬಲಿ
ಡಾ.ಮಂಜುನಾಥ ಅವರ ಸಂಬಂಧಿ ಡಾ.ನಾಗೇಂದ್ರ ಬಿಬಿಎಂಪಿಯಲ್ಲಿ ವೈದ್ಯಾಧಿಕಾರಿಯಾಗಿ, ಖಾಸಗಿ ಆಸ್ಪತ್ರೆಗಳ ಕೊರೋನಾ ಹಾಸಿಗೆ ಹಂಚಿಕೆ ವಿಭಾಗದಲ್ಲೆ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೂ ಸಹಾಯ ಮಾಡಲು ಸಾಧ್ಯವಾಗಲಿಲ್ಲ ಎಂದು ಡಾ.ಮಂಜುನಾಥ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಡಾ.ಮಂಜುನಾಥ ಕುಟುಂಬದ 6 ಸದಸ್ಯರು ಕೊರೋನಾ ಸೋಂಕಿನಿಂದ ನರಳಿದ್ದು, ಈಗ ಚೇತರಿಸಿಕೊಂಡಿದ್ದಾರೆ.