Wednesday, November 30, 2022

ಗೂಡು ಕಟ್ಟಿದ ಮನಸಿನಾಗೆ ಆಸೆ ಬಾನಾಡಿ…

Follow Us

ಕನ್ನಡ ಚಿತ್ರರಂಗದ ಪ್ರತಿಭಾವಂತ ಎಂದು ನಿಸ್ಸಂಶಯವಾಗಿ ಹೇಳಬಹುದಾಗಿದ್ದ ನಟ ಸಂಚಾರಿ ವಿಜಯ್. ‘ಮೇಲೊಬ್ಬ ಮಾಯಾವಿʼ ಅವರು ನಟಿಸುತ್ತಿದ್ದ ಚಿತ್ರ. ಆ ಮಾಯಾವಿಯ ಆಟದಲ್ಲಿ ನಮ್ಮನ್ನು ಬಿಟ್ಟು ಸಾಗಿದ್ದಾರೆ.

– ಸುಮನಾ
newsics.com@gmail.com

ಮೇಲೊಬ್ಬ ಮಾಯಾವಿʼ ಇಷ್ಟು ಕಠೋರವಾಗಿದ್ದಿರಬಹುದೆಂದು ಯಾರೂ ಎಣಿಸಿರಲಿಲ್ಲ. ‘ಗೂಡು ಕಟ್ಟಿದ ಮನಸಿನಾಗೆ ಆಸೆ ಬಾನಾಡಿ….’ ಎಂದು ಹಾಡುತ್ತ ಬಾನಲ್ಲೇ ಸೇರಿಹೋದರು ವಿಜಯ್. ವಿಧಿಯಾಟಕ್ಕೆ ಕನಸುಕಂಗಳ ಯುವ ನಟ ಸಂಚಾರಿ ವಿಜಯ್‌ ಬಲಿಯಾಗಿದ್ದಾರೆ. ಪ್ರತಿಭಾವಂತ ನಟ ಎಂದೇ ಗುರುತಿಸಿಕೊಂಡಿದ್ದ, ಅಹಂ ಎನ್ನುವುದನ್ನು ಎಳ್ಳಷ್ಟೂ ಅರಿತಿರದಿದ್ದ, ಮುದ್ದುಮುಖದ ವಿಜಯ್‌ ಇನ್ನಿಲ್ಲ ಎನ್ನುವುದನ್ನು ಅರಗಿಸಿಕೊಳ್ಳುವುದು ಕಷ್ಟ.

‘ಸಂಚಾರಿʼ ರಂಗತಂಡ ರೂಪಿಸಿದ ಪ್ರತಿಭೆ ವಿಜಯ್‌ ಕುಮಾರ್ ಬಿ. ತಮ್ಮ ಹೆಸರಿನೊಂದಿಗೆ ರಂಗತಂಡದ ಹೆಸರನ್ನೂ ತಂದರು. 2011ರಲ್ಲಿ ಮೊದಲ ಚಿತ್ರದಲ್ಲಿ ಕಾಣಿಸಿಕೊಂಡಾಗ ವಿಜಯ್‌ ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. 2015ರಲ್ಲಿ ತೆರೆಗೆ ಬಂದ ‘ನಾನವನಲ್ಲ, ಅವಳುʼ ಅವರ ಅದ್ಭುತ ಪ್ರತಿಭೆಯನ್ನು ಒರೆಗೆ ಹಚ್ಚಿತು. ಹೊಸ ತಲೆಮಾರಿನ, ನಟನೆಯನ್ನು ಕರಗತ ಮಾಡಿಕೊಂಡ ಯುವಕನೋರ್ವನನ್ನು ಚಿತ್ರರಂಗಕ್ಕೆ ನೀಡಿತು. ಆ ಚಿತ್ರ ವಿಜಯ್‌ ಗೆ ರಾಷ್ಟ್ರಪ್ರಶಸ್ತಿ, ರಾಜ್ಯ ಪ್ರಶಸ್ತಿಗಳ ಜತೆಗೆ ಜನಪ್ರಿಯತೆಯನ್ನೂ ತಂದುಕೊಟ್ಟಿತು.

ಸಂಚಾರಿ ವಿಜಯ್‌ ಅವರೊಂದಿಗೆ ಒಡನಾಡಿದ ಎಲ್ಲರೂ ಹೇಳುವ ಒಂದು ಸಾಮಾನ್ಯ ಅಂಶವೆಂದರೆ, ಅವರ ಸರಳತೆ. ರಾಷ್ಟ್ರಪ್ರಶಸ್ತಿ ಪಡೆದ ನಟನಾದರೂ, ಜನಪ್ರಿಯತೆ ಪಡೆದ ಮೇಲೂ, ಎಲ್ಲಕ್ಕಿಂತ ಮುಖ್ಯವಾಗಿ, ಚಿತ್ರರಂಗದಲ್ಲಿ ಒಂದಿಷ್ಟು ಹೆಸರು-ಕಾಸು ಮಾಡಿಕೊಂಡ ಮೇಲೆಯೂ ಅವರಲ್ಲಿ ಅಹಂಕಾರ ಎನ್ನುವುದು ಲವಲೇಶವೂ ಸುಳಿದಿರಲಿಲ್ಲ. ಸರಳತೆ, ಎಲ್ಲರೊಂದಿಗೂ ನಕ್ಕು-ನಲಿಯುವುದು, ಎಲ್ಲರೊಂದಿಗೂ ಸಾಮಾನ್ಯವಾಗಿರುವುದು ಅವರ ಜನ್ಮಜಾತ ಗುಣವಾಗಿತ್ತು. ಸೆಲೆಬ್ರಿಟಿ ಎನ್ನುವುದನ್ನು ತಲೆಗೇರಿಸಿಕೊಳ್ಳದೆ ಜೀವಿಸಿದ ಮಹಾನ್‌ ಕಲಾವಿದ ವಿಜಯ್. ಬಹುಶಃ ತಮ್ಮ ಜೀವನ ಅಲ್ಪ ಎನ್ನುವುದನ್ನು ಮೊದಲೇ ಅರಿತಿದ್ದರೋ ಏನೋ.

ಬಾಲ್ಯದಲ್ಲೂ ನಟನೆಯತ್ತ ಒಲವು…

ಪಂಚನಹಳ್ಳಿಯ ವಿಜಯ್‌ 1983ರ ಜುಲೈ 18ರಂದು ಚಿಕ್ಕಮಗಳೂರಿನ ಕಡೂರಿನ ಪಂಚನಹಳ್ಳಿಯಲ್ಲಿ ಜನಿಸಿದ್ದ ವಿಜಯ್‌ ಬಾಲ್ಯದಿಂದಲೇ ನಟನೆಯ ಬಗ್ಗೆ ಅಪಾರ ಒಲವು ಹೊಂದಿದ್ದರು. ತಮ್ಮ ಇಚ್ಛೆಯಂತೆ ಓದುವ ಸಮಯದಲ್ಲೇ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದರು. 2011ರಲ್ಲಿ ‘ರಂಗಪ್ಪ ಹೋಗ್ಬಿಟ್ನಾ?ʼ ಚಿತ್ರದ ಮೂಲಕ ಸ್ಯಾಂಡಲ್‌’ವುಡ್‌’ಗೆ ಕಾಲಿಟ್ಟರು. ಬಳಿಕ, 2014ರವರೆಗೂ ಚಿಕ್ಕ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. 2014ರಲ್ಲಿ ಅವರನ್ನು ನಾಯಕ ನಟನನ್ನಾಗಿ ಮಾಡಿದ ಚಿತ್ರ ‘ಹರಿವುʼ. ಆಗಲೇ ಕೆಲವರು ವಿಜಯ್‌ ಅವರ ಪ್ರತಿಭೆಯನ್ನು ಗುರುತಿಸಿದ್ದರು. 2015ರಲ್ಲಿ ಮಾದೇಶ, ವಿದ್ಯಾ ಆಗಿ ಮೂಡಿದ ವಿಜಯ್‌, ತೃತೀಯ ಲಿಂಗಿಯ ಬದುಕನ್ನು ತೆರೆದಿಟ್ಟರು. ಬಿ.ಎಸ್. ಲಿಂಗದೇವರು ನಿರ್ದೇಶನದ ಈ ಚಿತ್ರ, ವಿಜಯ್‌ ಅವರ ವೃತ್ತಿ ಜೀವನವನ್ನೇ ಬದಲಿಸಿಬಿಟ್ಟಿತು.

‘ದ್ವಂದ್ವದ ಬದುಕು ಸಾಕಾಗಿದೆ, ಸಾಯೋದಿದ್ದರೆ ಮಹಿಳೆಯಾಗಿಯೇ ಸಾಯುತ್ತೇನೆʼ ಎನ್ನುವ ಮಾದೇಶನ ಅಸಹಾಯಕತೆ, ‘ಈ ಸಮಾಜ ನಾವು ಮರ್ಯಾದೆಯಿಂದ ಬದುಕೋಕೆ ಏನು ಮಾಡಿದೆ?ʼ ಎಂದು ಪ್ರಶ್ನಿಸುವ ವಿದ್ಯಾ ತೃತೀಯಲಿಂಗಿಗಳ ತಲ್ಲಣಗಳನ್ನು ತೆರೆದಿಡುತ್ತಾರೆ. ಈ ಎರಡೂ ಪಾತ್ರಗಳಲ್ಲಿ ತಮ್ಮ ನಟನಾ ಕೌಶಲ್ಯವನ್ನು ಜಗತ್ತಿಗೆ ಅನಾವರಣಗೊಳಿಸಿದ್ದರು. ಸ್ಯಾಂಡಲ್‌ ವುಡ್‌’ನ ಅದೆಷ್ಟೋ ಮಂದಿ ಹೊಟ್ಟೆಕಿಚ್ಚುಪಟ್ಟುಕೊಂಡರು. ಅದೆಷ್ಟೋ ಮಂದಿ ಮೆಚ್ಚುಗೆ ನೀಡಿ, ಬೆನ್ನು ತಟ್ಟಿದರು. ರಾಷ್ಟ್ರಪ್ರಶಸ್ತಿ ಬಂದರೂ ಮುಂದಿನ ಸಿನಿ ಬದುಕು ಸರಳವಾಗಿರಲಿಲ್ಲ. ಸ್ಟಾರ್‌ ನಟರ ಮಧ್ಯದಲ್ಲಿ ಸಿಂಪಲ್‌ ಹುಡುಗನೊಬ್ಬ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವುದು ಸುಲಭವಾಗಿರಲಿಲ್ಲ. ಚಿತ್ರರಂಗದಲ್ಲಿ ನೂರಾರು ಯುವಜನರು ಅದೃಷ್ಟ ಪರೀಕ್ಷೆ ಮಾಡುತ್ತಲೇ ಇರುತ್ತಾರೆ. ಯಶಸ್ಸು ಸಿಗುವುದು ಕೆಲವೇ ಕೆಲವು ಮಂದಿಗೆ ಮಾತ್ರ. ಅಂಥವರಲ್ಲಿ ವಿಜಯ್‌ ಒಬ್ಬರು. ಸರಳ ವ್ಯಕ್ತಿತ್ವದ, ನಟನಾ ಕೌಶಲವನ್ನು ಕರಗತ ಮಾಡಿಕೊಂಡಿದ್ದ ವಿಜಯ್‌ ಇಷ್ಟು ಬೇಗ ಬದುಕಿಗೆ ವಿದಾಯ ಹೇಳಬಹುದೆಂದು ಯಾರೂ ಊಹಿಸಿರಲಿಲ್ಲ. ಯಾವುದೇ ರೀತಿಯ ಪಾತ್ರವನ್ನೂ ವಿಜಯ್‌ ಸುಲಲಿತವಾಗಿ ಅಭಿನಯಿಸುತ್ತಿದ್ದರು. ಅದಕ್ಕೊಂದು ಬೇರೆಯದೇ ಆದ ತೂಕ ನೀಡುತ್ತಿದ್ದರು.

ವಿಜಯ್ ಅವರ ‘ಹರಿವು’ ಸಿನಿಮಾ ಪ್ರಶಸ್ತಿ ಪಡೆದರೂ ಆರ್ಥಿಕ ಮುಗ್ಗಟ್ಟಿನಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲೇ ಇಲ್ಲ.

ಬೆಂಗಳೂರಿಗೆ ಬಂದ ಆರಂಭದಲ್ಲಿ ರಾಜಾಜಿನಗರದ ಹೊಟೆಲೊಂದರಲ್ಲಿ‌ ತಟ್ಟೆ ತೊಳೆದು ಬದುಕು ಆರಂಭಿಸಿದ ರಾಷ್ಟ್ರಪ್ರಶಸ್ತಿ ಪಡೆಯುವ ಮಟ್ಟಕ್ಕೆ ಬೆಳೆದದ್ದೇ ರೋಚಕ. 70-80 ಆಡಿಷನ್ ಕೊಟ್ಟರೂ ಸಿನಿಮಾದಲ್ಲಿ ಸ್ಥಾನ ಗಿಟ್ಟಿಸಲು ಸಾಧ್ಯವಾಗಲೇ ಇಲ್ಲ.

ಚಿಕ್ಕಮಗಳೂರು ಜಿಲ್ಲೆಯ ಪಂಚನಹಳ್ಳಿಯ‌ ಬಡ ಕುಟುಂಬದಲ್ಲಿ‌ ಜನಿಸಿದ ಬಿ.ವಿಜಯಕುಮಾರ್ ಕಷ್ಟವನ್ನು‌ ಬಗಲಲ್ಲೇ‌ ಕಟ್ಟಿಕೊಂಡವರು. ತಾಯಿ‌ ಜಾಂಡೀಸ್’ನಿಂದ ಮೃತಪಟ್ಟರು. ತಂದೆ ಕೂಡ ಅದೇ ಕೊರಗಲ್ಲಿ ಕೊನೆಯುಸಿರೆಳೆದಿದ್ದರು.

ಮಾನವೀಯ ಮುಖ…

ಮಾನವಿಯತೆಯ ತುಂಬಿದ ಕೊಡ ವಿಜಯ್‌ ನಟಿಸಿದ್ದುದು ಕೆಲವೇ ಚಿತ್ರಗಳಲ್ಲಿ. ರಾಮರಾಮ ರಘುರಾಮ, ದಾಸ್ವಾಳ, ಹರಿವು ಚಿತ್ರಗಳ ಬಳಿಕ ‘ನಾನವನಲ್ಲ, ಅವಳುʼ. ನಂತರ ಅವಕಾಶಗಳು ಸಾಕಷ್ಟು ಬಂದು, ಎಂಟಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದರು. ಸದ್ಯ, ‘ಮೇಲೊಬ್ಬ ಮಾಯಾವಿʼ ಎನ್ನುವ ಚಿತ್ರದಲ್ಲಿ ಅಭಿನಯಿಸುತ್ತಿದ್ದರು. ಇವೆಲ್ಲಕ್ಕಿಂತ ಮಿಗಿಲಾಗಿ, ಸಂಚಾರಿ ವಿಜಯ್‌ ಎಂದರೆ, ಮಾನವೀಯತೆಗೆ ಮತ್ತೊಂದು ಮುಖವಾಗಿದ್ದರು. ಕೊರೋನಾ ಲಾಕ್‌ ಡೌನ್‌ ಸಮಯದಲ್ಲಿ ಸಂತ್ರಸ್ತರಿಗೆ ಅನೇಕ ರೀತಿಯಲ್ಲಿ ನೆರವಾಗಿದ್ದರು. ಅಪಘಾತವಾದ ಸಮಯದಲ್ಲೂ ಅವರು ಬಡವರಿಗೆ ಫುಡ್‌ ಕಿಟ್‌ ವಿತರಣೆ ಮಾಡಿ ವಾಪಸ್‌ ಬರುತ್ತಿದ್ದರು.

ಹುಡುಗಿಯರ ಪ್ರೀತಿಯ ಹುಡುಗ…

ಹುಡುಗಿಯರ ಪ್ರೀತಿಯ ವಿಜಯ್‌ ನಗುಮೊಗದ, ಕನಸುಕಂಗಳ ಯುವಕ ವಿಜಯ್. ತಮ್ಮ ಚಬ್ಬಿ ಚಬ್ಬಿ ಚೀಕ್ಸ್…ನಿಂದಾಗಿ ಹುಡುಗಿಯರ ಮನಸೆಳೆದಿದ್ದರು. ಒಗ್ಗರಣೆ ಚಿತ್ರದ ಬ್ಯೂಟಿ ಸಲೂನ್‌ ಯುವಕನಾಗಿ ಆಪ್ತವಾಗಿದ್ದರು. ಈ ಚಿತ್ರದ ತೆಲಗು ಮತ್ತು ತಮಿಳು ಚಿತ್ರಗಳಲ್ಲೂ ವಿಜಯ್‌ ಅಭಿನಯಿಸಿದ್ದರು.

ನಾವು ಕಾಣದ ಇನ್ನೊಂದು ಮುಖ

ನಟನೆ ಬಿಟ್ಟರೆ ಬಾಲ್ಯದಿಂದಲೂ ವಿಜಯ್‌ ಗಿದ್ದ ಮತ್ತೊಂದು ಆಸೆಯೆಂದರೆ, ಕಾರು ಕೊಳ್ಳುವುದು. ಆದರೆ ಕೊರೋನಾ‌ ಕಾಲದಲ್ಲಿ ಬಡವರ ಸೇವೆಗಾಗಿ ಪ್ರೀತಿಯ ಕಾರನ್ನೇ ಮಾರಿದ್ದರು.

ವಿದ್ಯಾಭ್ಯಾಸದ ಸಮಯದಲ್ಲಿ ಸೈಕಲ್‌ ಮೇಲೆ ತಿಪಟೂರಿನಿಂದ ಹಾಸನ, ಸಕಲೇಶಪುರ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಸ್ನೇಹಿತರೊಂದಿಗೆ ಅಲೆದಾಡುತ್ತಿದ್ದುದು ಅವರ ಪ್ರೀತಿಯ ಹವ್ಯಾಸವಾಗಿತ್ತು. ಹುಟ್ಟಿದ್ದು ಹೇಳಿಕೇಳಿ ಚಿಕ್ಕಮಗಳೂರಿನಲ್ಲಿ, ಸಹಜವಾಗಿಯೇ ಬೆಟ್ಟವೇರುವ, ಕಾಡು ಸುತ್ತುವ ಅಭ್ಯಾಸ ಬೆಳೆದಿತ್ತು. ಮುಳ್ಳಯ್ಯನಗಿರಿ, ಕಲ್ಲತ್ತಗಿರಿಗೆ ಬೈಕಿನಲ್ಲಿ ಸ್ನೇಹಿತರೊಂದಿಗೆ ರೈಡ್‌ ಹೋಗುತ್ತಿದ್ದರು. ನಟನಾಗಿ ಗುರುತಿಸಿಕೊಂಡು ಬೆಂಗಳೂರಿಗೆ ಬಂದ ಬಳಿಕ ಕಾರು ಕೊಂಡಿದ್ದರು. ಮಳೆಯಲ್ಲಿ ರೈಡ್‌ ಹೋಗುವುದನ್ನು ಭಾರೀ ಇಷ್ಟಪಡುತ್ತಿದ್ದರು. ಮಲೆನಾಡಿಗೆ ವರ್ಷಕ್ಕೊಮ್ಮೆಯಾದರೂ ಭೇಟಿ ನೀಡುವುದು ಪ್ರಕೃತಿಪ್ರಿಯ ವಿಜಯ್‌ ರೂಢಿಯಾಗಿತ್ತು. ಇದೀಗ, ಬೈಕ್‌ ಮೇಲೆ ಸಾಗುತ್ತಿರುವಾಗಲೇ ಅಪಘಾತವಾಗಿ ನಮ್ಮ ನಡುವಿನಿಂದ ಸುಮ್ಮನೆ ಎದ್ದು ಹೋಗಿಬಿಟ್ಟಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ಕೇಂದ್ರ ಜಲ ಆಯೋಗದ ಅಧ್ಯಕ್ಷರಾಗಿ ಚಂದ್ರಶೇಖರ್ ಅಯ್ಯರ್

newsics.com ನವದೆಹಲಿ: ಜಲ ತಜ್ಞ ಚಂದ್ರಶೇಖರ್ ಅಯ್ಯರ್ ಅವರು ‘ಕೇಂದ್ರ ಜಲ ಆಯೋಗದ’  ಮುಂದಿನ ಅಧ್ಯಕ್ಷರಾಗಿ ನಿಯುಕ್ತಿಯಾಗಿದ್ದಾರೆ. ಗುರುವಾರ ಡಿಸೆಂಬರ್ 1 ರಿಂದ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಚಂದ್ರಶೇಖರ್...

KSRTC ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ ಬಹುಮಾನ ಗೆಲ್ಲಿ

newsics.com ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನೂತನವಾಗಿ ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ  ಬಹುಮಾನ ಗೆಲ್ಲ  ಬಹುದಾಗಿದೆ. ಮಲ್ಟಿ ಆ್ಯಕ್ಸೆಲ್ ಸ್ಲೀಪರ್ ಹಾಗೂ ವಿದ್ಯುತ್ ಚಾಲಿತ ವಾಹನ ಗಳಿಗೆ ಸಾರ್ವಜನಿಕರು ಹಾಗೂ ಪ್ರಯಾಣಿಕರಿಂದ...

ವಿಚಿತ್ರ ಹಬ್ಬದ ಆಚರಣೆ- ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ

newsics.com ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಸೋಮೇಶ್ವರ ದೇವರ ಜಾತ್ರೆಯಲ್ಲಿ ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ ಮಾಡುವ ವಿಶಿಷ್ಟ ಆಚರಣೆ ಕಂಡು ಬರುತ್ತದೆ. ಪ್ರತಿವರ್ಷ ಛಟ್ಟಿ ಅಮವಾಸ್ಯೆಯ ಆಸುಪಾಸು ನಡೆಯುವ...
- Advertisement -
error: Content is protected !!