newsics.com
ಬೆಳಗಾವಿ: ಹಿಂದೂ ಪದಕ್ಕೆ ಅಶ್ಲೀಲ ಅರ್ಥಗಳಿವೆ ಎಂದಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬುಧವಾರ ಪತ್ರ ಬರೆದಿದ್ದಾರೆ. ‘ಹಿಂದೂ ಪದದ ಕುರಿತು ನಾನು ನೀಡಿದ ಹೇಳಿಕೆಯನ್ನು ತಿರುಚಿ ಅಪಪ್ರಚಾರ ಮಾಡಲಾಗಿದೆ. ಇದರಿಂದ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿ ಆಗಬಾರದು ಎಂಬ ಕಾರಣಕ್ಕೆ ಹೇಳಿಕೆ ಹಿಂಪಡೆಯುತ್ತಿದ್ದೇನೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದಿಸುತ್ತೇನೆ’ ಎಂದು ಪತ್ರದಲ್ಲಿ ಹೇಳಿದ್ದಾರೆ.
ನಾನು ಹೇಳಿಕೆ ನೀಡಿದ ಬಳಿಕ ಕೆಲ ಪಟ್ಟಭದ್ರ ಹಿತಾಸಕ್ತಿಗಳು ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಹೊರಟಿವೆ. ನನ್ನ ತೇಜೋವಧೆ ಮಾಡುವ ವ್ಯವಸ್ಥಿತಿ ಪಿತೂರಿ ನಡೆದಿದೆ. ಈ ಎಲ್ಲ ಅಂಶಗಳ ಕುರಿತು ತನಿಖೆಗಾಗಿ ಸಮಿತಿ ರಚಿಸಬೇಕು ಎಂದೂ ಮನವಿ ಮಾಡಿದ್ದಾರೆ.
ಜಾರಕಿಹೊಳಿ ಹೇಳಿಕೆಯನ್ನು ಕಾಂಗ್ರೆಸ್ ನಾಯಕರೂ ಸೇರಿದಂತೆ ಹಲವರು ಖಂಡಿಸಿದ್ದಲ್ಲದೆ ಆಕ್ರೋಶ ವ್ಯಕ್ತಪಡಿಸಿದ್ದರು. ಬುಧವಾರ ರಾಜ್ಯದ ಎಲ್ಲೆಡೆ ಬಿಜೆಪಿ ಹಾಗೂ ವಿವಿಧ ಸಂಘಟನೆಗಳಿಂದ ಪ್ರತಿಭಟನೆಗಳೂ ನಡೆದಿವೆ.
ವಕೀಲರೊಬ್ಬರು ಈ ಹೇಳಿಕೆ ಸಂಬಂಧ ಮಾನನಷ್ಟ ಮೊಕದ್ದಮೆ ಹೂಡಿದ್ದು, ಹೇಳಿಕೆ ಹಿಂಪಡೆದರೂ ಸತೀಶ್ ಜಾರಕಿಹೊಳಿ ಈ ಮಾನನಷ್ಟ ಮೊಕದ್ದಮೆಯನ್ನು ಎದುರಿಸಬೇಕಾಗುತ್ತದೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ನ.6ರಂದು ನಡೆದ ಮಾನವ ಬಂಧುತ್ವ ವೇದಿಕೆಯ ಕಾರ್ಯಕ್ರಮದಲ್ಲಿ ಸತೀಶ ಜಾರಕಿಹೊಳಿ ಈ ಹೇಳಿಕೆ ನೀಡಿದ್ದರು.