newsics.com
ನವದೆಹಲಿ: ಮುಂದಿನ 24 ಗಂಟೆಯೊಳಗೆ ರಾಜೀನಾಮೆ ನೀಡುವಂತೆ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಗೆ ಕ್ರೀಡಾ ಸಚಿವಾಲಯ ಗುರುವಾರ ರಾತ್ರಿ ಅಂತಿಮ ಸೂಚನೆ ನೀಡಿದೆ.
ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಮ್ಮ ನಿವಾಸದಲ್ಲಿ ಪ್ರತಿಭಟನಾನಿರತ ಕುಸ್ತಿಪಟುಗಳನ್ನು ಭೇಟಿ ಮಾಡಿದ ನಂತರ ಈ ಬೆಳವಣಿಗೆ ನಡೆದಿದೆ.
ಕುಸ್ತಿಪಟುಗಳಾದ ಬಜರಂಗ್ ಪುನಿಯಾ, ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ರವಿ ದಹಿಯಾ ಗುರುವಾರ ರಾತ್ರಿ 10 ಗಂಟೆ ವೇಳೆಗೆ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ಕ್ರೀಡಾ ಇಲಾಖೆ ಬ್ರಿಜ್ ಭೂಷಣ್‌ಗೆ ಈ ಸೂಚನೆ ನೀಡಿದೆ.
ಈ ಮಧ್ಯೆ, ಅವರ ಬಳಿ ಯಾವುದಾದರೂ ಪುರಾವೆಗಳಿದ್ದರೆ ಅವುಗಳನ್ನು ಸಾರ್ವಜನಿಕಗೊಳಿಸಿ ಎಂದು ನಾನು ಮೊದಲ ದಿನವೇ ಹೇಳಿದ್ದೆ. ನನ್ನ ಮೇಲಿನ ಲೈಂಗಿಕ ಕಿರುಕುಳ ಆರೋಪ ಸಾಬೀತಾದರೆ ನಾನು ಗಲ್ಲಿಗೇರಲೂ ಸಿದ್ಧ ಎಂದು ಬ್ರಿಜ್ ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ.
ನಾನು ಎಫ್‌ಐಆರ್ ಹಾಗೂ ಸಿಬಿಐ ಎದುರಿಸಲು ಸಿದ್ಧನಿದ್ದೇನೆ. ಭಾರತದ ಅತ್ಯುನ್ನತ ಕಾನೂನು ಪ್ರಾಧಿಕಾರವನ್ನು ಎದುರಿಸಲು ನಾನು ಸಿದ್ಧ ಎಂದು ಅವರು ಹೇಳಿದ್ದಾರೆ.
ಅಧ್ಯಕ್ಷಗಿರಿ ನನ್ನ ವೈಯಕ್ತಿಕ ಹುದ್ದೆಯಲ್ಲ. ನಾನು ಕಾರ್ಯಕಾರಿ ಸಮಿತಿ ಸಭೆಗೆ ಈಗಾಗಲೇ ಮನವಿ ಮಾಡಿದ್ದೇನೆ. ಸಮಿತಿ ಯಾವುದೇ ನಿರ್ಧಾರ ಕೈಗೊಂಡರೂ ನಾನು ಒಪ್ಪುತ್ತೇನೆ. ನಾನು ಅವರಿಗಿಂತ ದೊಡ್ಡವನಲ್ಲ, ದೇಶಕ್ಕಿಂತ ದೊಡ್ಡವನಲ್ಲ ಎಂದು ಬ್ರಿಜ್ ಭೂಷಣ್ ಹೇಳಿದ್ದಾರೆ.