newsics.com
ತಮಿಳುನಾಡು: ಬಾರದ ಲೋಕಕ್ಕೆ ತೆರಳಿರುವ ಗಾನ ಗಾರುಡಿಗ, ಪದ್ಮ ವಿಭೂಷಣ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಅಂತ್ಯಕ್ರಿಯೆ ಇಂದು (ಸೆ.26) ನಡೆಯಲಿದೆ.
ತಿರುವಳ್ಳೂರು ಜಿಲ್ಲೆಯ ತಮಾರೈಪಕ್ಕಂ ಗ್ರಾಮದಲ್ಲಿರುವ ಅವರ ಫಾರ್ಮ್ ಹೌಸ್ ನಲ್ಲಿ ಸಕಲ ಸರ್ಕಾರೀ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
ನಿನ್ನೆ ಮಧ್ಯಾಹ್ನ ಎಂಜಿಎಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಪಾರ್ಥಿವ ಶರೀರವನ್ನು ಚೆನ್ನೈನಲ್ಲಿನ ನಣಗಂಬುಕಂ ನಿವಾಸಕ್ಕೆ ತರಲಾಯಿತು. ರಾತ್ರಿ 10:45 ರ ವೇಳೆಗೆ ಎಸ್ಪಿಬಿ ಪಾರ್ಥಿವ ಶರೀರವನ್ನು ಫಾರ್ಮ್ ಹೌಸ್ ಗೆ ತರಲಾಗಿದ್ದು, ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಬೆಳಗ್ಗೆ 11 ಕ್ಕೆ ಅಂತ್ಯಕ್ರಿಯೆ ನಡೆಯಲಿದ್ದು, ಅಲ್ಲಿಯವರೆಗೂ ಅಂತಿಮ ದರ್ಶನ ನಡೆಯಲಿದೆ.
ತಮಿಳುನಾಡಲ್ಲದೆ ದೇಶದಾದ್ಯಂತ ಜನರ ಹೃದಯ ಗೆದ್ದಿದ್ದ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಅಂತ್ಯಸಂಸ್ಕಾರ ವೇಳೆ ಪೊಲೀಸ್ ಇಲಾಖೆಯಿಂದ ಗೌರವ ಸಮರ್ಪಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿಯವರ ಅಧಿಕೃತ ಹೇಳಿಕೆ ತಿಳಿಸಿದೆ.
ಕೊರೋನಾ ಸೋಂಕಿನಿಂದ ಸುಮಾರು ಎರಡು ತಿಂಗಳು ಹೋರಾಟ ನಡೆಸಿದ 74 ವರ್ಷದ ಹಿರಿಯ ಗಾಯಕ, ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದು, ದೇಶದ ಸಂಗೀತ ಲೋಕದ ಕೊಂಡಿಯೊಂದು ಕಳಚಿದಂತಾಗಿದೆ. ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ 16 ಭಾಷೆಗಳಲ್ಲಿ ಸುಮಾರು 50 ಸಾವಿರ ಗೀತೆಗಳಿಗೆ ಧ್ವನಿಯಾಗಿರುವ ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಇಡೀ ದೇಶವೇ ಮರುಗಿದೆ. ಸೂಪರ್ ಸ್ಟಾರ್ ರಜನಿಕಾಂತ್, ಕಮಲ ಹಾಸನ್, ಚಿರಂಜೀವಿ ಸೇರಿ ಹಲವರು ಕಂಬನಿ ಮಿಡಿದಿದ್ದಾರೆ.