newsics.com
ಚೆನ್ನೈ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಖ್ಯಾತ ಗಾಯಕ ಡಾ.ಎಸ್.ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಮತ್ತಷ್ಟು ಗಂಭೀರವಾಗಿದೆ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.
ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಆಗಸ್ಟ್ 5ರಿಂದ ಚಿಕಿತ್ಸೆ ಪಡೆಯುತ್ತಿರುವ ಅವರು ಕೆಲ ದಿನಗಳ ಹಿಂದೆ ಚೇತರಿಕೆ ಕಂಡಿದ್ದರು. ಇಂದು ಆಸ್ಪತ್ರೆ ಬಿಡುಗಡೆ ಮಾಡಿರುವ ಅವರ ಹೆಲ್ತ್ ಬುಲೆಟಿನ್’ನಲ್ಲಿ ಅವರ ಸ್ಥಿತಿ ಬಿಗಡಾಯಿಸಿದೆ ಎಂದು ತಿಳಿಸಲಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ಅವರ ಆರೋಗ್ಯ ಕ್ಷೀಣಿಸುತ್ತಲೇ ಸಾಗಿದೆ. ಅವರ ಚಿಕಿತ್ಸೆಗೆ ಹೆಚ್ಚಿನ ಕ್ರಮ ಕೈಗೊಳ್ಳಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಎರಡು ದಿನಗಳ ಹಿಂದೆ ಎಸ್ಪಿ ಬಿ ಆರೋಗ್ಯದ ಕುರಿತು ಮಾಹಿತಿ ನೀಡಿದ್ದ ಅವರ ಮಗ ಚರಣ್, ತಂದೆ ಆರೋಗ್ಯ ಸುಧಾರಿಸುತ್ತಿದೆ ಎಂದಿದ್ದರು. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಅವರು ಸ್ಥಿರವಾಗಿದ್ದಾರೆ ಎಂದು ಇನ್ಸ್ಟಾಗ್ರಾಂನಲ್ಲಿ ತಿಳಿಸಿದ್ದರು.
ಸೆ.7ರಂದು ಕೊರೋನಾ ಪರೀಕ್ಷೆಗೆ ಒಳಗಾಗಿದ್ದ ಎಸ್ಪಿ ಅವರಿಗೆ ಸೋಂಕಿಲ್ಲ ಎಂಬುದಾಗಿ ವರದಿ ಬಂದಿತ್ತು. ಅವರ ಶ್ವಾಸಕೋಶ ಕೊಂಚ ಸುಧಾರಿಸುವ ಅವಶ್ಯಕತೆ ಇದೆ ಎಂದು ಚರಣ್ ತಿಳಿಸಿದ್ದರು. ಅವರ ದೇಹಕ್ಕೆ ಕೃತಕ ಶ್ವಾಸಕೋಶದ ಮೂಲಕ ರಕ್ತಚಲನೆಗೆ ವ್ಯವಸ್ಥೆ ಮಾಡಲಾಗಿದೆ.
ಆಗಸ್ಟ್ 13ರಂದು ಅವರ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ತಜ್ಞ ವೈದ್ಯರ ಸಲಹೆಯಂತೆ ಅವರನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ನಂತರ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಈಗ ಮತ್ತೆ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿದೆ.
ಎಸ್ಪಿಬಿ ಆರೋಗ್ಯ ಸ್ಥಿತಿ ಮತ್ತೆ ಗಂಭೀರ
Follow Us