ಬೆಂಗಳೂರು: ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಳ್ಳಲು ಮೇ 29ರವರೆಗೆ ಅವಕಾಶ ಕಲ್ಪಿಸಲಾಗಿದೆ.
ನಿಗದಿತ ದಿನಾಂಕದೊಳಗೆ ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಳ್ಳದ ವಿದ್ಯಾರ್ಥಿಗಳು ತಮ್ಮ ಮೂಲ ಪರೀಕ್ಷಾ ಕೇಂದ್ರದಲ್ಲಿಯೇ ಪರೀಕ್ಷೆ ಬರೆಯುವುದು ಕಡ್ಡಾಯವಾಗಿರುತ್ತದೆ. ಒಮ್ಮೆ ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಂಡ ನಂತರ ಈ ಹಿಂದೆ ನಿಗದಿಪಡಿಸಿದ್ದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶವಿರುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಸುತ್ತೋಲೆ ಸ್ಪಷ್ಟಪಡಿಸಿದೆ.
ವಸತಿನಿಲಯ/ವಸತಿ ಶಾಲೆಗಳಲ್ಲಿ ವಾಸ್ತವ್ಯವಿರುವ ಎಸ್ಎಸ್ಎಲ್ಸಿ ರೆಗ್ಯೂಲರ್ ವಿದ್ಯಾರ್ಥಿಗಳು ಮೂಲ ಕೇಂದ್ರದಿಂದ ಪರೀಕ್ಷೆ ಬರೆಯಲು ಸಾಧ್ಯವಿಲ್ಲದಿದ್ದಲ್ಲಿ ಎಸ್ಎಸ್ಎಲ್ಸಿ ತರಗತಿಯನ್ನು ವ್ಯಾಸಂಗ ಮಾಡುತ್ತಿದ್ದ ಶಾಲೆಯ ಮುಖ್ಯ ಶಿಕ್ಷಕರ ದೂರವಾಣಿ ಅಥವಾ ಮೊಬೈಲ್ ಮೂಲಕ ಸಂಪರ್ಕಿಸಿ ತಾವು ಸದ್ಯ ವಾಸ ಮಾಡುತ್ತಿರುವ ಮನೆಗೆ ಹತ್ತಿರವಾದ ಪರೀಕ್ಷಾ ಕೇಂದ್ರವನ್ನು ಗುರುತಿಸಿ ಪ್ರಸ್ತುತ ಇರುವ ಪರೀಕ್ಷಾ ಕೇಂದ್ರದಿಂದ ಗುರುತಿಸಿರುವ ಪರೀಕ್ಷಾ ಕೇಂದ್ರಕ್ಕೆ ಮುಖ್ಯ ಶಿಕ್ಷಕರ ಲಾಗಿನ್ ಮೂಲಕ ಬದಲಾಯಿಸಿಕೊಳ್ಳಬೇಕು. 29ರೊಳಗೆ ಈ ಪ್ರಕ್ರಿಯೆಯನ್ನು ಮುಗಿಸಿಕೊಳ್ಳಬೇಕು.
ಪರೀಕ್ಷಾ ಕೇಂದ್ರ ಬದಲಾವಣೆ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ಹಳೆಯ ನೋಂದಣಿ ಸಂಖ್ಯೆಯೇ ಮುಂದುವರಿಯಲಿದೆ.
ಪರೀಕ್ಷಾ ಕೇಂದ್ರ ಬದಲಾವಣೆ ನಂತರ ಪ್ರಸ್ತುತ ಓದುತ್ತಿರುವ ಶಾಲೆಯ ಮುಖ್ಯ ಶಿಕ್ಷಕರಿಂದ ವಾಟ್ಸಾಪ್ ಮೂಲಕ ಪ್ರವೇಶ ಪತ್ರ ಬರೆದು ಪ್ರಿಂಟ್ಔಟ್ ಜತೆ ಪರೀಕ್ಷೆಗೆ ಹಾಜರಾಗಬಹುದು.
ಹೊಸದಾಗಿ ಆಯ್ಕೆ ಮಾಡಿಕೊಂಡಿರುವ ಪರೀಕ್ಷಾ ಕೇಂದ್ರವಿರುವ ಶಾಲೆಯ ಮುಖ್ಯ ಶಿಕ್ಷಕರಿಂದ ಪ್ರಿಂಟ್ಔಟ್ ಪಡೆದುಕೊಳ್ಳಬಹುದಾಗಿದೆ. ತಾವು ಪ್ರಸ್ತುತ ವಾಸವಿರುವ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ತಮ್ಮ ನೋಂದಣಿ ಸಂಖ್ಯೆಯನ್ನು ತಿಳಿಸಿ ಪ್ರವೇಶ ಪತ್ರ ಪಡೆಯಬಹುದಾಗಿದೆ.
ಪರೀಕ್ಷಾ ಕೇಂದ್ರ ಬದಲಾವಣೆಗೆ ಅಥವಾ ಪ್ರವೇಶ ಪತ್ರ ಪಡೆದುಕೊಳ್ಳುವ ಪ್ರಕ್ರಿಯೆಗೆ ಯಾವುದೇ ಶುಲ್ಕವಿಲ್ಲ. ಯಾವುದೇ ತೊಂದರೆ ಅಥವಾ ಅಡಚಣೆ ಉಂಟಾದಲ್ಲಿ 080-23310075, 23310076, 9739131393 ಸಂಪರ್ಕಿಸಬಹುದು.