ಕೊಡಗು: ಭಾಗಮಂಡಲದ ಬ್ರಹ್ಮಗಿರಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾದವರ ಶೋಧ ಕಾರ್ಯದ ಕಾರ್ಯಚರಣೆ ಸ್ಥಗಿತಗೊಳಿಸಲಾಗಿದೆ. ಗುಡ್ಡ ಕುಸಿತದಲ್ಲಿ ಹುದುಗಿಹೋಗಿರುವ ತಲಕಾವೇರಿ ದೇವಾಲಯದ ಪ್ರಧಾನ ಅರ್ಚಕ ನಾರಾಯಣ ಆಚಾರ್ಯ ಅವರ ಕುಟುಂಬದ ಐವರು, ಮನೆ, ಹಸುಗಳು ಬದುಕಿರುವ ಸಾಧ್ಯತೆ ಕಡಿಮೆ ಎಂದು ಕೊಡಗು ಜಿಲ್ಲಾಡಳಿತ ಹೇಳಿದೆ.
ಘಟನೆ ನಡೆದು 2 ದಿನಗಳಾದರೂ ಇನ್ನೂ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಭಾರೀ ಮಳೆ ಹಾಗೂ ಪ್ರತಿಕೂಲ ವಾತಾವರಣ ಹಿನ್ನೆಲೆಯಲ್ಲಿ ಭಾಗಮಂಡಲದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ನಾರಾಯಣ ಆಚಾರ್ಯರ ಕುಟುಂಬ ಬದುಕುಳಿದಿರುವುದು ಬಹುತೇಕ ಅನುಮಾನ. ಆಚಾರ್ಯರು ನಮ್ಮ ಮಾತು ಕೇಳಿ ವಾಸಸ್ಥಳ ಬದಲಾಯಿಸಿದ್ದಾರೆ ಚೆನ್ನಾಗಿತ್ತು. ಅವರು ಅವರ ಪತ್ನಿ, ಅಣ್ಣ, ಆಪ್ತರ ಮಾತನ್ನೂ ಕೇಳಲಿಲ್ಲ. ಅವರ ಜತೆ 40 ಹಸುಗಳೂ ಕೊಚ್ಚಿಹೋಗಿವೆ. ಇಂದು ಕಾರ್ಯಚರಣೆ ಮಾಡಲು ಸಾಧ್ಯವಾಗಲಿಲ್ಲ. ನಾಳೆ ಮಳೆ ಕಡಿಮೆ ಆದರೆ ಕಾರ್ಯಚರಣೆ ಮಾಡುತ್ತೇವೆ. ಜಿಲ್ಲೆಯಲ್ಲಿನ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿ ನಿಭಾಯಿಸುತ್ತಿದ್ದಾರೆ ಎಂದು ಹೇಳಿದರು.
ಭಾಗಮಂಡಲ, ತಲಕಾವೇರಿ ಸುತ್ತಮುತ್ತ 170 ಮಿಲಿ ಮೀಟರ್ ಮಳೆ ಸುರಿಯುತ್ತಿದ್ದಂತೆ ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆಯಾಗಿತ್ತು. ಗುರುವಾರ (ಆ.6) ಮುಂಜಾನೆ ಬೆಟ್ಟ ಕುಸಿದು ತಲಕಾವೇರಿಯ ಅರ್ಚಕರಾದ ನಾರಾಯಣ ಆಚಾರ್ ಮತ್ತು ಅವರ ಕುಟುಂಬದ ಐವರು ಕಣ್ಮರೆಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಎನ್ ಡಿಆರ್ ಎಫ್ ತಂಡ ಸ್ಥಳಕ್ಕೆ ತೆರಳಲು ಯತ್ನಿಸಿತ್ತು. ಆದರೆ ಭಾಗಮಂಡಲದ ತ್ರಿವೇಣಿ ಸಂಗಮ ಮುಳುಗಡೆ ಆಗಿದ್ದರಿಂದ ಎನ್ ಡಿಆರ್ ಎಫ್ ತಂಡ ಸ್ಥಳಕ್ಕೆ ತೆರಳಲು ಸಾಧ್ಯವಾಗಿಲ್ಲ.
ತೀವ್ರ ಮಳೆಯಾಗುತಿದ್ದುದರಿಂದ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿದ್ದ ನಾರಾಯಣ ಆಚಾರ್ಯ ಅವರ ಕುಟುಂಬಕ್ಕೆ ಅಲ್ಲಿಂದ ಸ್ಥಳಾಂತರ ಆಗುವಂತೆ ಹಲವರು ಬುಧವಾರ ಸಂಜೆಯಷ್ಟೇ ಪರಿಪರಿಯಾಗಿ ಹೇಳಿದ್ದರಂತೆ. ಆದರೆ ತಾವು ಹುಟ್ಟಿ ಬೆಳೆದ ಊರು. ಬಿಟ್ಟು ಹೋಗುವುದು ಹೇಗೆ?, ಏನೂ ಆಗುವುದಿಲ್ಲ ಎಂದು ನಾರಾಯಣ ಆಚಾರ್ಯ ಸುಮ್ಮನಾಗಿದ್ದರಂತೆ. ಆದರೆ ಗುರುವಾರ ಬೆಳಗ್ಗೆ ತೋಟದ ರೈಟರ್ ಅಲ್ಲಿಗೆ ಹೋಗಿ ನೋಡಿದಾಗ ನಾರಾಯಣ ಆಚಾರ್ಯ ಅವರ ಕುಟುಂಬದ ಎರಡು ಮನೆಗಳು ಅಷ್ಟೇ ಅಲ್ಲ, ಇಡೀ ಬೆಟ್ಟವೇ ಅಲ್ಲಿಂದ ಕಣ್ಮರೆಯಾಗಿದೆ.
ತಲಕಾವೇರಿ ಅರ್ಚಕರ ಕುಟುಂಬ ಭೂಸಮಾಧಿ; ಶೋಧ ಕಾರ್ಯಾಚರಣೆ ಸ್ಥಗಿತ
Follow Us