ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಯುವವರೆಗೆ ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಜಾರಿ ಮಾಡದಿರಲು ಸರ್ಕಾರ ತೀರ್ಮಾನಿಸಿದೆ.
ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಸಾವಿನ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಜಾರಿ ಮಾಡುವ ಬಗ್ಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲ ಸಚಿವರು ಮತ್ತೆ ಲಾಕ್ಡೌನ್ ಜಾರಿ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರೆ, ಉಳಿದ ಕೆಲವು ಸಚಿವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಬಿಗಿಯಾದ ಕಾನೂನು ಮೂಲಕವೇ ಸೋಂಕು ಹಬ್ಬದಂತೆ ಕ್ರಮ ತೆಗೆದುಕೊಳ್ಳೋಣ. ಇಷ್ಟಾದ ಮೇಲೂ ಸೋಂಕು ಕಡಿಮೆಯಾಗದಿದ್ದರೆ ತಜ್ಞರು ನೀಡುವ ವರದಿಯನ್ನೇ ಯಥಾವತ್ತಾಗಿ ಅನುಷ್ಠಾನ ಮಾಡೋಣ ಎಂದು ಸಚಿವರಿಗೆ ಸಿಎಂ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ.
ತಕ್ಷಣವೇ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಇತರೆಡೆ ಲಾಕ್ಡೌನ್ ಜಾರಿ ಮಾಡುವ ಬಗ್ಗೆ ಸಚಿವರಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ. ಸದ್ಯ ಪರೀಕ್ಷೆ ಜು.4ರವರೆಗೆ ನಡೆಯಲಿದ್ದು, ತಕ್ಷಣವೇ ಲಾಕ್ಡೌನ್ ಜಾರಿ ಮಾಡಿದರೆ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗುತ್ತದೆ. ಪರೀಕ್ಷೆ ಕೇಂದ್ರಗಳಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದರೆ ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕಕ್ಕೊಳಗಾಗುತ್ತಾರೆ. ಮೊದಲೇ ಪರೀಕ್ಷಾ ಕೇಂದ್ರಗಳಿಗೆ ಬರಲು ಹೆದರಿದ್ದಾರೆ. ಇಂತಹ ಸಂದರ್ಭದಲ್ಲೇ ನಾವು ಲಾಕ್ಡೌನ್ ಜಾರಿ ಮಾಡಿದರೆ ಪರಿಸ್ಥಿತಿ ಹದಗೆಟ್ಟು ಹೋಗುತ್ತದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಈ ಪ್ರಸ್ತಾಪ ಬೇಡವೇ ಬೇಡ ಎಂದು ಕೆಲ ಸಚಿವರು ಸಿಎಂ ಮೇಲೆ ಒತ್ತಡ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಯಾವ ಯಾವ ಜಿಲ್ಲೆ, ತಾಲ್ಲೂಕುಗಳಲ್ಲಿ ಎಲ್ಲೆಲ್ಲಿ ಸೋಂಕಿನ ಸಂಖ್ಯೆಗಳು ಹೆಚ್ಚಾಗಿವೆಯೋ ಅಂತಹ ಕಡೆ ಇನ್ನಷ್ಟು ಲಾಕ್ಡೌನ್ ಬದಲಿಗೆ ಸೀಲ್ಡೌನ್ನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು. ಯಾರು ನಿಯಮಗಳನ್ನು ಉಲ್ಲಂಘಿಸುತ್ತಾರೋ ಅಂಥವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದು ಸೇರಿದಂತೆ ಕಠಿಣ ಕ್ರಮಗಳನ್ನು ಜರುಗಿಸಬೇಕೆಂದು ಸಚಿವರು ಸಲಹೆ ಮಾಡಿದ್ದಾರೆ.