ನವದೆಹಲಿ: ನಿಷೇಧಕ್ಕೊಳಗಾಗಿರುವ ಆಲಿಬಾಬಾ ಗ್ರೂಪ್ ನ ಯುಸಿ ಬ್ರೌಸರ್ ವೆಬ್ ಭಾರತದಲ್ಲಿರುವ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ.
ಗಲ್ವಾನ್’ನಲ್ಲಿ ಭಾರತ-ಚೀನಾ ಸೈನಿಕರ ನಡುವೆ ಸಂಘರ್ಷ ನಡೆದ ನಂತರ ಭಾರತವು 59 ಚೀನಿ ಆಯಪ್ ಗಳನ್ನು ಭಾರತದಲ್ಲಿ ನಿಷೇಧಿಸಿತ್ತು. ದಶಕಗಳ ಹಿಂದೆ ಭಾರತ ಪ್ರವೇಶಿಸಿದ ಯುಸಿ ವೆಬ್, ನ್ಯೂಸ್ ಆಪ್ ಒಂದನ್ನು ಮತ್ತು ವಿಮೇಟ್ ತುಣುಕು ವಿಡಿಯೋಗಳ ಆಪನ್ನು ಹೊಂದಿದ್ದು, ಜುಲೈ 15ರ ಪ್ರಕಟಣೆಯಲ್ಲಿ ‘ನೀವು ಕೆಲಸಗಳನ್ನು ಕಳೆದುಕೊಳ್ಳುತ್ತೀರಿ’ ಎಂದು ಉದ್ಯೋಗಿಗಳಿಗೆ ತಿಳಿಸಿರುವುದಾಗಿ ರಾಯ್ಟರ್ಸ್ ವರದಿ ತಿಳಿಸಿದೆ.
ಭಾರತದಲ್ಲಿ 130 ಮಿಲಿಯನ್ ಜನರು ಯುಸಿ ಬ್ರೌಸರ್ ಬಳಸುತ್ತಿದ್ದರೆ, ಭಾರತದಲ್ಲಿ 100ಕ್ಕೂ ಹೆಚ್ಚು ನೇರ ಉದ್ಯೋಗಿಗಳಿದ್ದರೆ, ನೂರಾರು ಸಂಖ್ಯೆಯಲ್ಲಿ ಥರ್ಡ್ ಪಾರ್ಟಿ ಕೆಲಸಗಾರರಿದ್ದರು.
ಈ ಮಧ್ಯೆ, ಇ ಕಾಮರ್ಸ್ ಆಯಪ್ ಕ್ಲಬ್ ಫ್ಯಾಕ್ಟರಿ ಭಾರತೀಯ ಮಾರಾಟಗಾರರಿಗೆ ನೀಡಬೇಕಾಗಿರುವ ಬಾಕಿ ಮೊತ್ತವನ್ನು ತಡೆಹಿಡಿದಿದೆ. ‘ಮಾರಾಟಗಾರರೊಂದಿಗಿನ ಬಾಕಿ ಮೊತ್ತವನ್ನು ಕ್ಲಬ್ ಫ್ಯಾಕ್ಟರಿ ಆಪ್ ಮತ್ತು ವೆಬ್ ಸೈಟ್ ಮೇಲಿನ ನಿಷೇಧ ಹಿಂಪಡೆಯುವವರೆಗೆ ತಡೆಹಿಡಿಯಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ದೇಶದಲ್ಲಿ ಕ್ಲಬ್ ಫ್ಯಾಕ್ಟರಿಯ ಸುಮಾರು 30 ಸಾವಿರ ಮಾರಾಟಗಾರರಿದ್ದಾರೆ.
ಭಾರತದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿದ ಯುಸಿ ಬ್ರೌಸರ್!
Follow Us