ನವದೆಹಲಿ: ಕಂಬಳದ ಕೆಸರುಗದ್ದೆಯಲ್ಲಿ ಉಸೇನ್ ಬೋಲ್ಟ್ಗಿಂತ ವೇಗವಾಗಿ ಓಡಿದ ಶ್ರೀನಿವಾಸ್ ಗೌಡ ಬಗ್ಗೆ ಕೇಂದ್ರ ಕ್ರೀಡಾ ಸಚಿವಾಲಯದ ರಾಜ್ಯ ಸಚಿವ ಕಿರೆನ್ ರಿಜಿಜು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಶ್ರೀನಿವಾಸರನ್ನು ತಾವು ದೆಹಲಿಗೆ ಕರೆಸಿಕೊಳ್ಳುವುದಾಗಿ ಕಿರೆನ್ ರಿಜಿಜು ಟ್ವಿಟ್ಟರ್ನಲ್ಲಿ ತಿಳಿಸಿದ್ದಾರೆ. ದೆಹಲಿಯಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ ತರಬೇತುದಾರರ ಎದುರಿಗೆ ಶ್ರೀನಿವಾಸ್ ಅವರ ಓಟದ ವೇಗವನ್ನು ಪರೀಕ್ಷಿಸಲಾಗುವುದು ಎಂದು ರಿಜಿಜು ತಿಳಿಸಿದ್ದಾರೆ. ಭಾರತದ ಯಾವುದೇ ಪ್ರತಿಭೆಯೂ ಅವಕಾಶದಿಂದ ವಂಚಿತರಾಗಲು ನಾವು ಬಿಡುವುದಿಲ್ಲ ಎಂದು ಸಚಿವ ರಿಜಿಜು ಹೇಳಿದ್ದಾರೆ.
ಕಂಬಳ ವೀರ:
ಕರ್ನಾಟಕದ ಪ್ರಸಿದ್ಧ ಜಾನಪದ ಕ್ರೀಡೆಯಾಗಿರುವ ಕಂಬಳದಲ್ಲಿ ಶ್ರೀನಿವಾಸ್ ಗೌಡ ಇತ್ತೀಚೆಗೆ ಓಡಿದ್ದು ಹೊಸ ದಾಖಲೆಯನ್ನೇ ಬರೆದಿದೆ. 142 ಮೀಟರ್ ಅಂತರವನ್ನು ಶ್ರೀನಿವಾಸ್ ಕೇವಲ 13.42 ಸೆಕೆಂಡ್ಗಳಲ್ಲಿ ಓಡಿದ್ದರು. 100 ಮೀಟರ್ ಓಟಕ್ಕೆ ಇವರು ತೆಗೆದುಕೊಂಡ ಸಮಯ ಕೇವಲ 9.55 ಸೆಕೆಂಡ್. ವಿಶ್ವದ ಅತ್ಯಂತ ವೇಗದ ಓಟಗಾರ ಎಂದು ಕರೆಸಿಕೊಂಡಿರುವ ಉಸೇನ್ ಬೋಲ್ಟ್ 100 ಮೀಟರ್ ಓಡಲು 9.58 ಸೆಕೆಂಡ್ ಸಮಯ ತೆಗೆದುಕೊಂಡಿದ್ದು, ಬೋಲ್ಟ್ ದಾಖಲೆಯನ್ನೇ 28 ವರ್ಷದ ಶ್ರೀನಿವಾಸ್ ಮುರಿದಿದ್ದಾರೆ.
ಉಸೇನ್ ಬೋಲ್ಟ್ ದಾಖಲೆ ಮುರಿದ ಶ್ರೀನಿವಾಸ್ ಗೆ ಕೇಂದ್ರ ಸಚಿವ ರಿಜಿಜು ಮೆಚ್ಚುಗೆ
Follow Us