Wednesday, September 27, 2023

ಭಾವದುತ್ತುಂಗದಲ್ಲಿ ತೇಲಿಸಿಬಿಟ್ಟೆಯಲ್ಲೋ…

Follow Us

* ನಂದಿನಿ ವಿಶ್ವನಾಥ ಹೆದ್ದುರ್ಗ
response@134.209.153.225

ಮತ್ತೆ ಕರೆಯಬೇಕೆನಿಸಿತು.
ಹೊರಳಿ ನೋಡಿದವ ಹೂಗುಟ್ಟ.
ನನ್ನ ಹಾದಿಯ ವಿಳಾಸ ಇನ್ನು ಖಚಿತ

ಸುಮ್ಮನೊಂದು ಧ್ವನಿ ಒಳಗಿನದೆಲ್ಲವನ್ನೂ ಧ್ವನಿಸಿಬಿಡುತ್ತೆ ನೋಡು ಸೂರ್ಯ.
ಒಂದು ಮಳೆಸುರಿವ ಇಳಿಸಂಜೆ ಮೆಟ್ಟಿಲ ತುಂಬೆಲ್ಲ ನಿನ್ನ ಕೆಸರು ಹತ್ತಿದ ಚಪ್ಪಲಿಯ ಗುರುತು ಹತ್ತಿಸಿ ಹತ್ತಿ ಬಂದಿದ್ದೆ.
ಮುಚ್ಚಿದ ಬಾಗಿಲೆದಿರು ನಿಂತು ಸಣ್ಣಗೆ ತಟ್ಟಿದವನು ಎಡಕಿಟಿಕಿ ಗಾಜಿನಲಿ ಹಣಕಿ ಹಾಕಿದ್ದು ಏನಂಥ ವಿಶೇಷವಲ್ಲ.
ಎರಡನೇ ಬಾರಿ ನೀ ಕದ ತಟ್ಟುವ‌ ಮುನ್ನ ತೆರೆದವಳಿಗೆ ಎಂದೂ ನೋಡದ ಅಪರಿಚಿತ ಮುಖ.
ಅಜಾನುಬಾಹು, ಅಗಲಪಾದ, ಕಡುಗಪ್ಪಿನ ಹುಡುಗ..

ಆಳ್ತನಕ್ಕೂ ನೋಟಕ್ಕೂ ಹೊಂದಿಕೆಯಾಗದಂತಹ ನಿನ್ನ ಹೂದಳ ಹೋಲುವ ಕಣ್ಣು..
ಸೋನೆ ಮುಗಿಲಿಗೆ ಒಮ್ಮೆಗೆ ಗಾಳಿ ಬೀಸಿ ವೇಗ ಪಡೆಯಿತು ಮಳೆ..
‘ಒ..ಒಳಗೆ ಬನ್ನಿ…’
ಯಾರೂಂತ ಗೊತ್ತಿಲ್ಲ ನೀನು ನನಗೆ…
ನೀನೋ ‌ಕಾರಿಳಿದು ಕೆಸರುಹಾದಿ ಹಾಸಿ ಬರುವಾಗ ಮೆತ್ತಿದ್ದ ಮಣ್ಣಿಂದಾಗಿ ಒಳಬರಲಾಗದೆ, ಮಳೆಗೆ ಹೊರ ನಿಲ್ಲಲೂ ಆಗದೆ ಚಡಪಡಿಸುತ್ತಿದ್ದೆ.
ಕಸಿವಿಸಿಗೊಂಡವನ ಪಾದ ನೋಡಿ ಓಡಿ ಹಿತ್ತಾಳೆ ತಂಬಿಗೆಯಲಿ ಸುಡು ನೀರು ಕೊಟ್ಟೆ..
ಕಾಲಿಗೆ ಸುರಿದುಕೊಂಡವನು ತಾಕಿದ ಬಿಸಿಗೆ ಆಹ್ ಎಂದಿದ್ದು ಯಾಕೋ ಮೆಚ್ಚುಗೆ ಅನಿಸಿತ್ತು.

“ಅಗಲಪಾದದ ಹುಡುಗ…”

ಸುಮ್ಮನಿಂದು ಹೆಸರಿಟ್ಟುಬಿಟ್ಟೆ..

ಒಳಬಂದವನ ಕೂರಿಸಿ
ಒಂದು ಮೊಲದ ಬಿಳಿಯ ಟವೆಲು ಕೊಟ್ಟು ಮೈಮುಖ ಒರೆಸಿಕೊಳ್ಳುವುದನ್ನೇ ನೋಡಿದವಳಿಗೆ ಒಳಗಿಂದ ಜ್ವರವೇರಿದ್ದು ಸುಳ್ಳಾದರೆ ನನ್ನಾಣೆ.
ಆದರೇನು..
ಮಳ್ಳ ಮನಸ್ಸಿನ ಕಳ್ಳಾಟವನ್ನೆಲ್ಲಾ ಒಗೆದು ಒಂದು ಕಡೆ ಬಿಟ್ಟು ಗಂಭೀರ ಭಾವ ತೋರಿ ‘ಹೇಳಿ’
ಎಂದೆ.

ನೀನೊಮ್ಮೆ ನನ್ನ ನೋಡಿದ್ದಷ್ಟೇ ಸೂರ್ಯ..
ಏನಿದ್ದರೂ ಇವನೇ ಇನ್ನೂ ನನ್ನ ಗಮ್ಯ..

ನಿರ್ಧರಿಸಿಬಿಟ್ಟಿತು ಮನಸ್ಸು.

‘ಕಾಫಿ.?’
‘ಆದೀತು’
ಆಹಾ…
ಕನಸಿನಲ್ಲೆಂಬಂತೆ ಹಾಲು ಕುದಿಸಿ ಎರಡು ಬಾರಿ ಎತ್ತರದಿಂದ ಎತ್ತಿ ಹುಯ್ದು ಆಗಷ್ಟೇ ನನಗಾಗಿ ಮಾಡಿಟ್ಟುಕೊಂಡಿದ್ದ ಗಾಢ ಡಿಕಾಕ್ಷನ್ ಬೆರೆಸಿ ಪುಡಿಬೆಲ್ಲ ಹಾಕಿ ರುಚಿ ನೋಡುವಾಗ ತುಟಿ ತಾಕಿಸಿಕೊಂಡಿದ್ದು ಆಕಸ್ಮಿಕವೆಂದರೆ ಒಪ್ಪಬೇಕಿಲ್ಲ.
ಪಳಪಳ ಹೊಳೆಯುವ ಟ್ರೇಯಲ್ಲಿ ಹಬೆಯಾಡುವ ಕಾಫಿ ಇಟ್ಟು ನಿನ್ನ ಬಳಿ ಕುಳಿತು ಕೊಟ್ಟಾಗ ನೀನು
‘ನೀವು?’
ಎಂದೆ.

ನಾನು ಸುಮ್ಮನೆ ಮುಗುಳ್ನಕ್ಕೆ..
ಸದ್ಯ ನನಗಿದರ ಅವಶ್ಯಕತೆ ಇತ್ತು ಎಂದು ಸಣ್ಣಗೆ ನುಡಿದ ನೀನು ಎರಡು ಕೈಯಲ್ಲೂ ಕಾಫಿ ಕಪ್ ಹಿಡಿದು
ಅದೆಷ್ಟು ತನ್ಮಯನಾಗಿ ಗುಟುಕರಿಸಿದ್ದೆ..
ಮೊದಲ ಬಾರಿಗೆ ಕಾಫಿ ಕುಡಿಯುವ ನೋಟ ಇಷ್ಟು ಸೊಗಸಾಗಿರುತ್ತದೆಂಬ ಹೊಳಹು ತಿಳಿದಿತ್ತು.

ಒಳಬಂದು ಆರು ನಿಮಿಷ ಕಳೆದಿದೆ.
ಇಲ್ಲೀವರೆಗೂ ನೀನಿನ್ನೂ ಅಪರಿಚಿತನೇ..
ಯಾಕೋ ಗೊತ್ತಿಲ್ಲ ಸೂರ್ಯ.
‘ನೀವು?’
ಅಂತ
ಕೇಳಬೇಕೆನಿಸಲಿಲ್ಲ..

‘ಕಾಫಿ ಚೆನ್ನಾಗಿತ್ತು’
‘ಥ್ಯಾಂಕ್ಯೂ’
ಇನ್ನೂ ಏನಾದರೂ ಹೇಳಬಹುದಿತ್ತು ನೀನು..
‘ಸರಿ..ನಾನಿನ್ನು ಹೊರಡಲೇ’
ನೀನು ಕೇಳಿದಾಗಲೇ ತಿಳಿದಿದ್ದು.
ಜಾರಿಬಿದ್ದದ್ದು
ನಾ ಮಾತ್ರವಲ್ಲ .
ಬಂದ ಕಾರಣವೇನೆಂದೂ ಹೇಳದೆ ಹೊರಟ ನೀನೂ ಮೇಲೇಳಲಾರದಷ್ಟು ಜಾರಿದ್ದಿ.!

ಏನು ಬಂದಿರಿ, ಯಾರು ನೀವು ಎನ್ನುವುದು ಸಭ್ಯತೆಯಲ್ಲ ಎನುವುದಕ್ಕಿಂತಲೂ ಬಂದವನು ನನ್ನ ಬಾಳಿನ ಹನ್ನೆರಡು ನಿಮಿಷಗಳನ್ನು ಭಾವದುತ್ತುಂಗದಲ್ಲಿ ಇರಿಸಿದ್ದ ಎನ್ನುವುದಷ್ಟೇ ನನಗೆ ಸುಖವೆನಿಸಿತ್ತು..

ತಲೆಯಲ್ಲಾಡಿಸಿ ಸರಿ ಎಂದವಳ ಒಪ್ಪಿಗೆ ಸಿಕ್ಕವನಂತೆ ಹೊರಟವನು ಹೊಸಿಲು ದಾಟುವ ಮೊದಲು ತಿರುಗಿ ನೋಡಿದ್ದೆ.
ನೆನಪಾದವನಂತೆ..
‘ಓಹ್..ಹೇಳುವುದ ಮರೆತೆ..ನೀವು ಬರೆಯುತ್ತೀರಾ ಎನ್ನುವುದು ತಿಳಿಯಿತು..
ನಿಮ್ಮ ಪದಗಳೂರನ್ನು ನಾವೂ ನೋಡಬೇಕೆನಿಸುವ ಆಸೆ ಇದೆ..
ಮೈ ಕಾರ್ಡ್…ಆಲ್ ಡೀಟೈಲ್ಸ್ ಆರ್ ದೇರ್..
ಇನ್ನೂ ಮೂರು ದಿನಗಳೊಳಗೆ ನನಗೊಂದು ಪುಟ್ಟ ಬರಹ ಕಳಿಸಿಕೊಡಿ…
ಬರಲೇ..?’

ಒಪ್ಪಿಗೆ ಕೇಳಲಿಲ್ಲ.
ಬಂದವನು ನೀನು ಸುಮ್ಮನೇ ಬರಲಿಲ್ಲ..
ಹೊರಡುವ ಮೊದಲು ನೀನು ಕೇಳಿದ
‘ಬರಲೇ’ ಪ್ರಶ್ನೆಗೆ ನಾನು ಎದೆ ಕದವ ತೆರೆದು ಹೊಸ್ತಿಲು ತೊಳೆದು ರಂಗವಲ್ಲಿ ಬಿಟ್ಟಿದ್ದೆ…
ನೀ ಹೋದ ಮೇಲೆ ಮನವೆಲ್ಲಾ ನಿನ್ನ ಹೆಜ್ಜೆ
ಮೂಡಿದ್ದ ಜಗುಲಿ..

“ಈ ಮೆಟ್ಟಿಲುಗಳ ಮೇಲೆ
ಕೆಲವು ಹಾಡಗಳಿವೆ.
ಹಾಗಾಗಿ ಹೆಚ್ಚು ತೊಳೆಯಲಾರೆ”

ಜೀವ ವೀಣೆ ನೀನಾಗಿದ್ದು ಹೇಗೆ..?
ಯಾಕಾದೆ ಬಾಳಿನೊಲುಮೆಯ ಭಾವಗೀತೆ..?
ನಾ ಬರೆದ ನಾಲ್ಕು ಸಾಲು ನಿನ್ನ ಪತ್ರಿಕೆಯ ಮುಖ್ಯ ಪುಟದಲ್ಲಿ..!
ಸೂರ್ಯ…
ತಿಂಗಳು ಕಳೆಯುವಷ್ಟರಲ್ಲಿ ಪ್ರೀತಿ ತಿಮಿರು ನಮ್ಮಿಬ್ಬರನ್ನೂ ಇನ್ನಿಲ್ಲದಂತೆ ವ್ಯಾಪಿಸಿತ್ತು‌ ನೋಡು.

ನಾ ಏಳುವಾಗ, ಬೀಳುವಾಗ, ಹೊರಳುವಾಗ ಮರಳುವಾಗ ನೀನೇ ನೀನು..
ನಿನ್ನ ಮುಂಜಾವು, ನಡುರಾತ್ರಿ, ಸುಡುಹಗಲು,
ಇಳಿಸಂಜೆಗಳಿಗೆ ನನ್ನಿರುವಿನ ಬಣ್ಣ..
ಸೂರ್ಯ…
ಒಂದು ಘಳಿಗೆಯ ನೋಟ .. ಒಂದೇ ಘಳಿಗೆಯದ್ದು.
ನಾವು ಒಬ್ಬರೊಳಗೊಬ್ಬರು ಬೆರೆತೆವು ಹೇಗೆ..?

ಮೊದಲೇ ಹೇಳಿದ್ದೆ.
ಮೊದಲ ದಿನ ನೀ ಬಂದಾಗ ಸುರಿ‌ಮಳೆ..
ಹೊರಟವನು ನನ್ನ ಹೂಗಿಡದೊಳಗಿಂದ ಆಗಷ್ಟೇ ಹೊಸ ಮೊದಲಗಿತ್ತಿಯಂತೆ ಅರಳಿ ನಿಂತಿದ್ದ ನೀಲಿಹೂವನ್ನು ಮೆಲ್ಲ ನೇವರಿಸಿ ಅದರ ಬೀಜಕ್ಕಾಗಿ ಬಳ್ಳಿ ಮಗುಚಿ ನೋಡಿದ್ದೆ‌.
ದೇವರು ದೊಡ್ಡವ..ಗಿಡದಲ್ಲೊಂದೂ ಬಲಿತ ಬೀಜವಿರಲಿಲ್ಲ..
ನಿನ್ನೆಯಷ್ಟೇ ಬಿಡಿಸಿಟ್ಟ ಬಟ್ಟಲು ಬೀಜಗಳ ಒಯ್ದು ನಿನ್ನ ಒಡ್ಡಿದ ಬೊಗಸೆಗೆ ಸುರಿದೆ.
ಒಂದು ಬೆಚ್ಚಗಿನ ಭಾವದಲ್ಲಿ ನನ್ನ ನೋಡಿದ್ದಕ್ಕೆ ಕೂಡಿದ್ದು ಕಣ್ಣು ಮಾತ್ರವಲ್ಲ ಸೂರ್ಯ..
ನಮ್ಮ ಮನಸ್ಸೂ…
ನಮ್ಮ ಮೊದಲ ಭೇಟಿಯಾದಾಗ ಇನ್ನೂ ಚೈತ್ರ…
ಆ ವರ್ಷ ಮಳೆಗಾಲದ ಮಳೆಗೆ ಜನವರಿ ಬಂದರೂ ‌ಮುಕ್ತಿ ಸಿಕ್ಕಿರಲಿಲ್ಲ.

ವಸಂತ ಬಂದು..
ಮುಗಿದ ಮೇಲೆ ಆಷಾಢ ಆವರಿಸಲೇ ಬೇಕಲ್ಲವೇ..

ಒಂದು ಆರಂಭಕ್ಕೆ ಮೊದಲ ಪರ್ವ ಕಾಲ ‌ಮುಗಿದು, ಏರು ಗತಿಯಲಿ ಏರಿ, ಮತ್ತೆ ತಿಟ್ಟು ಹತ್ತಿ ನಿಂತು ತುಸು ಹೊತ್ತು ಸುಧಾರಿಸಿಕೊಂಡು ಹೆಜ್ಜಿ ಇಡುವಾಗ ಇಳಿಕೆ..

ಹೌದು..ಇಳಿಕೆ..ಇದು ಎಲ್ಲಾ ಇಳಿಯುವ ಕಾಲ..
ಈ ಆರು ತಿಂಗಳಲ್ಲಿ…
ನಿನ್ನದು ಸಮಚಿತ್ತ… ನನ್ನದು ಕರಡಿಮುದ್ದು..
ನಿನ್ನದು ಬಯಕೆ.. ನನ್ನದು ಭಾವಲೋಕ…
ನಿನ್ನದು ನಸುನಗುವ ಮೌನ.. ನನ್ನದು ಅರಳಿ ಬೆಳಗುವ ಮಾತು..

ವಿರುದ್ಧ ಧ್ರುವಗಳೇ ಆಕರ್ಷಿತರಾಗುವುದು..!!

ಹೌದು…
ನನ್ನದು ಬರೀ ಆಕರ್ಷಣೆಯಲ್ಲ..
ಆಲಾಪ…ಆತಂಕ..ಅಸೂಯೆ…
ಒಂದು ಪ್ರೇಮಕ್ಕೆ ಆಪತ್ತು ತರಲು ಏನೇನು ಬೇಕೋ ಅದೆಲ್ಲವೂ ನನ್ನ ನಡಾವಳಿ.
ನೀನೊಮ್ಮೆ ಅಪ್ಪಿದರೆ ಸಾಕ್ಷಾತ್ ಸೂರ್ಯನ ಬೆಳಕೂ ಒಳನುಗ್ಗದಷ್ಟೂ ಬಲಿಷ್ಟತನವಿದ್ದರೂ ನನಗೆ ಭಯ..

‘ನೀನು….ನೀ….ನೀನು ನನ್ನೊಬ್ಬಳನ್ನು ಮಾತ್ರ ಪ್ರೀತಿಸುವುದು ತಾನೇ…?’
ಬೆಚ್ಚಿಬಿದ್ದಿದ್ದೆ‌ ನೀನು..!
ಸೂರ್ಯ…
ಯಾಕೆ ಸುಮ್ಮನಾಗಿದ್ದು ನೀನು?
ತೆಕ್ಕೆ ಸಡಿಲಿಸಿ ಎದ್ದು ಹೋಗುವ ಮುನ್ನ ಗದ್ದರಿಸಿ ಹೊರಡಬಹುದಿತ್ತು ತಾನೇ..?
ಮತ್ತೆಂದೂ ಹೀಗೆ ತುಳುಕಬಾರದು ಮಾತು ತುಟಿ ಮೀರಿ ಎನ್ನ ಬಹುದಿತ್ತು ತಾನೇ.?
ನೀ ಸುಮ್ಮನಾದೆ….ಜತೆಗೆ ತಣ್ಣಗಾದೆ…

ನಾನೋ ಕಾವು ಬಯಸುವ ಹೆಣ್ಣು..
ನೋವು ಸಹಿಸದೆ ತಣ್ಣಗಾದವನನ್ನು ತಾಳ್ಮೆಯಿಂದ ಒಲಿಸಿಕೊಳುವುದರ ಹೊರತು ಮತ್ತದೇ.. ಮತ್ತೆಮತ್ತದೆ ಪ್ರಶ್ನೆ ಕೇಳಿದ್ದೆ..
‘ಹೇಳು..ಏನವಳ ಹೆಸರು…?’
ಹೂದಳ ಹೋಲುವ ನಿನ್ನ ಕಣ್ಣು ನನ್ನೇ ‌ನೋಡಿದ್ದವು.
ಪೆದ್ದು ಹೆಣ್ಣು‌ ನಾನು…
ಕಣ್ಣು ಕೂಡಿದ್ದಕ್ಕೇ ಒಂದು ಕರಡಿ ಅಪ್ಪುಗೆ ಕೊಟ್ಟೆ..
ಮೈ ಕೊಡವಿ ತಣ್ಣಗೆ ಎದ್ದು ಹೋದವನ ಮತ್ತೆ ಒಲಿಸಿಕೊಳ್ಳಲಿ ಹೇಗೆ…?

ಯಾವ ಮರದಲಿ ಕುಳಿತ ಯಾವ ಹಕ್ಕಿಯ ಹಾಡು ನನ್ನವನ ಮನ ಕರಗಿಸಬಹುದು?
ಯಾವ ಹೂವಿನ ಗಂಧಕ್ಕೆ ಮತ್ತವನು ಮನ ಸೋಲಬಹುದು?
ಒಂದು ಹೊಸ ಚಿಟ್ಟೆಯನ್ನಾದರೂ ಕಳಿಸಿಕೊಡು ದೈವವೇ.
ರಾಯಭಾರಿಯಾಗಿ ಕಳಿಸಿಕೊಡಬೇಕಿದೆ ನನ್ನವನ ಒಲುಮೆಗೆ..

ಇಲ್ಲ.
ಯಾರೂ ಬರಲಿಲ್ಲ..
ಏನೂ ಕಾಣಲಿಲ್ಲ..
ಈಗೆಲ್ಲವೂ ಖಾಲಿಯಾಗಿದೆ, ಮುಗಿದು ಹೋಗಿದೆ..
ನನ್ನ ಹೊಳೆವ ಕಣ್ಣಿನ ಜಲ ಬತ್ತಿಹೋಯಿತು ಎಂದೋ.
ನನ್ನ ರೆಪ್ಪೆ ಮೇಲಿದ್ದ ಅವನಿತ್ತ ಮುತ್ತುಗಳ ಹುಡಿ ಉದುರಿಹೋಗಿದೆ ಹೇಗೋ.
ಸೋತ ಹೆಜ್ಜೆಗಳಿಗೆ ಅತಿವಜ್ಜೆ..
ಕೋಣೆ ಕಪಾಟಿನಲಿ ಕಳೆದ ಬಾರಿಯ ಪ್ರೇಮದಿನದ ಉಡುಗೊರೆ…
ಕಡುಗೆಂಪಿನ ಒಂದು ರೇಷಿಮೆ ದುಪ್ಪಟ್ಟಾ..

ಹೊದ್ದರೆ ಬಣ್ಣಕಳೆಯುತ್ತದೆಂದು,
ಹಳೆಯದಾಗುತ್ತದೆಂದು,
ಹೊಳಪು ಹೋಗುತ್ತದೆಂದು ಅವನೆದಿರು ಒಮ್ಮೆ ಮೈ ಸೋಕಿಸಿಕೊಂಡು ಮಡಿಸಿಟ್ಟಿದ್ದೆ ಹಾಗೆ..

ಹುಚ್ಚು ಹತ್ತಿದಾಗ , ಒರತೆ ಉಕ್ಕಿದಾಗ ಸುಮ್ಮನೆ ನೇವರಿಸಿ,ಕಣ್ಣಿಗೊತ್ತಿ,ತುಟಿ ಸೋಕಿಸಿ,ಘಮಿಸಿ… ಕನಸುಗಳ ಅದರೊಳಗೆ ಸುರಿದು ಮಡಿಸಿಟ್ಟು…

ಇಲ್ಲ… ಒಂದಿಡೀ
ಕಪಾಟು ತುಂಬಿಸುತ್ತೇನೆಂದು ‌ಮಾತು‌ಕೊಟ್ಟಿದ್ದೆ ನೀನು.
ಮರೆತಿಲ್ಲ ನಾನು..
ಸೂರ್ಯ..ಸಂದೇಹ ಸ್ತ್ರೀ ಲಕ್ಷಣ..
ಮುನಿಸು ತೊರೆದು
ಇನ್ನೂ ‌ಮನ್ನಿಸದೇ ಹೋದೆಯಾದರೆ
ಸುಮ್ಮನಿರಲಾರೆ..

ಇಂದು‌ ಮುಂಜಾವಿಗೆ ಅಂಗಚಲನ ಫಲದಲ್ಲಿ ಶುಭ ಸೂಚನೆ ದೊರೆತಾಗಿದೆ.
ಅದೇ ನೀ ಪಡೆದು ಹೋದ ನೀಲಿ‌ಹೂವಿನ‌ಬಳ್ಳಿ ಮತ್ತೆ ಮೈ ತುಂಬಾ ಹೂಮುಡಿದು ನಿಂತಿದೆ.
ಕೆಂಬೂತ ಮೇಲಮೇಲಕ್ಕೆ ಹಾರುತ್ತಿದೆ.
ಮುಗಿಲು ಅಕಾಲದಲಿ ಕರಿಗಟ್ಟುತ್ತಿವೆ..

ಮಿಂದು ಮುಖ ‌ನೋಡಿಕೊಂಡವಳ ಕಣ್ಣಲ್ಲಿ ನಿನ್ನದೇ ಬಿಂಬ..
ಇಂದು ಅದೇ ಪ್ರೇಮಿಗಳ ದಿನದ ಸಂಭ್ರಮ.
ಕನಸು ಸುರಿದು‌ ಮಡಿಸಿಟ್ಟ
ನೀ ಕೊಟ್ಟ
ಕಡುಗೆಂಪು ದುಪ್ಪಟ್ಟಾ
ಇಗೋ ನಿನ್ನ ಅಮಲೇರಿರುವ ಈ ‌ಮೈಯ ಹೊದಿಯುತ್ತಿದೆ..
ಬಂದೇ ಬರುವೆಯೆಂಬ‌ ನಂಬುಗೆ ನನದು.
ಎಂದಿನಂತೆ ಒಂದಾದರೂ ಸಂಪಿಗೆ ಪಕಳೆ ತಾ..
ಇಂದು..
ಈ ಸಂಜೆ ಮುಗಿವ ಮೊದಲು‌
ಅದೇ ಮೊದಲ ದಿನದ ಪ್ರೇಮಿಯಾಗಿ ಅಗಲ ಪಾದದ ತುಂಬಾ ಮಣ್ಣು‌ಮೆತ್ತಿಸಿಕೊಂಡು ಮತ್ತೆ ನನ್ನ ಮೆಟ್ಟಿಲು ಹತ್ತಿ ಬಾ.
ಕಾಲಿಗೆ ನೀರು ಕೊಡಲು ತಂಬಿಗೆ ಬೆಳಗಿ ಬಿಸಿಯಿಟ್ಟಿರುವೆ ನೀರು..
ಬಂದೆಯಾ….??

ಮತ್ತಷ್ಟು ಸುದ್ದಿಗಳು

vertical

Latest News

ಸ್ನೇಹಿತೆ ಜತೆ ದೈಹಿಕ ಸಂಪರ್ಕಕ್ಕೆ ಪ್ರೇಯಸಿ ಒತ್ತಾಯ: ನಿರಾಕರಿಸಿದ ಪ್ರಿಯಕರನ ಮರ್ಮಾಂಗವನ್ನೇ ಕಚ್ಚಿದ ಗೆಳತಿ!

newsics.com ಕಾಸ್ಪುರ: ತನ್ನ ಸ್ನೇಹಿತೆಯೊಂದಿಗೆ ದೈಹಿಕ ಸಂಪರ್ಕ ಸಾಧಿಸಲಿಲ್ಲ ಎಂದು ಕೋಪಗೊಂಡ ಗೆಳತಿ, ಪ್ರಿಯಕರನ ಗುಪ್ತಾಂಗಕ್ಕೆ ಕಚ್ಚಿದ್ದಾಳೆ. ಇಂಥದ್ದೊಂದು ವಿಚಿತ್ರ ಮತ್ತು ಆಘಾತಕಾರಿ ಘಟನೆ ನಡೆದಿದ್ದು ಉತ್ತರಪ್ರದೇಶದಲ್ಲಿ. ಇಲ್ಲಿನ...

ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಶಾನವಾಜ್ ಹುಸೇನ್’ಗೆ ಹೃದಯಾಘಾತ!

newsics.com ಮುಂಬೈ: ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಶಾನವಾಜ್ ಹುಸೇನ್'ಗೆ ಹೃದಯ ಸ್ತಂಭನವಾಗಿದ್ದು, ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಂಜಿಯೋಪ್ಲ್ಯಾಸ್ಟಿ ಮಾಡಿಸಲಾಗಿದೆ. ಶಾನವಾಜ್ ಹುಸೇನ್ ಹೃದಯಾಘಾತದಿಂದ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಂಜಿಯೋಪ್ಲಾಸ್ಟಿ...

ಮನೆ ನೌಕರರಿಗೆ ಕಿರುಕುಳ ನೀಡುತ್ತಿದ್ದ ಸೇನಾ ಮೇಜರ್, ಆತನ ಪತ್ನಿ ಬಂಧನ!

newsics.com ಅಸ್ಸಾಂ: ಮನೆ ನೌಕರರಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಸೇನಾ ಮೇಜರ್ ಹಾಗೂ ಆತನ ಪತ್ನಿಯನ್ನು ಅಸ್ಸಾಂನಲ್ಲಿ ಬಂಧಿಸಲಾಗಿದೆ. ಅಸ್ಸಾಂನ ದಿಮಾ ಹಸಾವೋ ಜಿಲ್ಲೆಯಲ್ಲಿ ಸೇನಾ ಮೇಜರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು...
- Advertisement -
error: Content is protected !!