Wednesday, November 30, 2022

ಸೆಲೆಬ್ರಿಟಿಗಳ ನಿಧನವಾರ್ತೆ ಘೋಷಣೆಯಲ್ಲಿ ವಿಳಂಬವೇಕೆ?

Follow Us

ಸುದ್ದಿ ಖಚಿತಪಡಿಸಲು ಇರುವ ಅಡ್ಡಿಗಳೇನು?

ಸಂಚಾರಿ ವಿಜಯ್‌ ನಿಧನರಾದ ಸಂದರ್ಭ ಮಾಧ್ಯಮಗಳು ನಿಯಂತ್ರಣ ಕಳೆದುಕೊಂಡು ಸುದ್ದಿ ಬಿತ್ತರಿಸಿದವು ಎನ್ನುವ ಆರೋಪ ಕೇಳಿಬಂದಿದೆ. ಸುದ್ದಿಯ ವಿಚಾರದಲ್ಲಿ ಮಾಧ್ಯಮಗಳು ಹೀಗೆ ವರ್ತಿಸುವುದು ಎಂದಿನಿಂದಲೂ ಇದ್ದದ್ದೇ. ಆದರೆ, ಸೆಲೆಬ್ರಿಟಿಗಳು ನಿಧನರಾದಾಗ, ಅವರ ಸಾವು ಖಚಿತವಾದಾಗಲೂ ನಿಧನವಾರ್ತೆ ಪ್ರಕಟಿಸಲು ಕಾರ್ಪೋರೇಟ್‌ ಆಸ್ಪತ್ರೆಗಳು ವಿಳಂಬ ಧೋರಣೆಯನ್ನೇಕೆ ಅನುಸರಿಸುತ್ತವೆ ಎನ್ನುವುದು ಮಿಲಿಯನ್‌ ಡಾಲರ್‌ ಪ್ರಶ್ನೆ. ಮಾಧ್ಯಮಗಳಿಗೆ ಹಲವು ರೀತಿಯ ಸುದ್ದಿಮೂಲಗಳಿರುತ್ತವೆ. ಅವು ಖಚಿತವೂ ಆಗಿರುತ್ತವೆ. ನಿಧನದ ವಿಚಾರದಲ್ಲಂತೂ ಖಂಡಿತವಾಗಿ ಗಡಿಬಿಡಿ ಪ್ರದರ್ಶನ ಮಾಡುವುದಿಲ್ಲ. ಕ್ಷಣಕ್ಷಣಕ್ಕೂ ಸುದ್ದಿ ಬಿತ್ತರಿಸುತ್ತ ಕಿರಿಕಿರಿ ಮಾಡಬಹುದೇ ಹೊರತು, ಈ ವಿಚಾರದಲ್ಲಿ ದುಡುಕುತನ ಪ್ರದರ್ಶಿಸುವುದು ಕಡಿಮೆ.

newsics.com@gmail.com

ಕನ್ನಡ ಸಿನಿರಂಗದ ಬಹುಮುಖ ಪ್ರತಿಭೆ ಸಂಚಾರಿ ವಿಜಯ್‌ ಅವರಿಗೆ ಅಪಘಾತವಾದಾಗಲೇ ಮಾಧ್ಯಮಗಳು ಅವರ ಸ್ಥಿತಿಯ ಕುರಿತು ವರದಿ ಮಾಡಲು ಆರಂಭಿಸಿದ್ದವು. ಇಷ್ಟು ಬೇಗ ಅವರು ಜಗತ್ತಿಗೆ ವಿದಾಯ ಹೇಳುತ್ತಾರೆಂದು ಯಾರೂ ನಿರೀಕ್ಷಿಸಿರಲಿಲ್ಲ. ಅವರ ಸಾವು ಇಡೀ ಕರುನಾಡನ್ನು ಬೆಚ್ಚಿಬೀಳಿಸಿದೆ. ಕ್ಷಣಕಾಲದ ಧಾವಂತ ಜೀವಕ್ಕೆ ಎರವಾಗಬಲ್ಲದು ಎನ್ನುವುದನ್ನು ಸಾರಿ ಹೇಳಿದೆ.
ಸಂಚಾರಿ ವಿಜಯ್‌ ಸ್ಥಿತಿ ಕ್ರಿಟಿಕಲ್‌ ಆಗಿ ಇನ್ನೇನು ಜೀವವುಳಿಯುವುದು ಕಷ್ಟ ಎನ್ನುವುದು ಮಾಧ್ಯಮಕ್ಕೆ ಕ್ಷಣಕ್ಷಣಕ್ಕೂ ತಿಳಿಯುತ್ತಿತ್ತು. ಕುಟುಂಬದವರು ಅಂಗಾಂಗ ದಾನದ ಬಗ್ಗೆ ಯೋಚನೆ ಮಾಡುತ್ತಿದ್ದಾರೆ ಎಂದಾಗಲೇ ಅವರು ಬದುಕುವುದು ನೂರಕ್ಕೆ ನೂರರಷ್ಟು ಅಸಾಧ್ಯ ಎನ್ನುವುದು ತಿಳಿದುಹೋಗಿತ್ತು. ಅಂಗಾಂಗ ದಾನಕ್ಕೆ ನಿರ್ಧರಿಸಿರುವುದಾಗಿ ಬೆಳಗ್ಗೆ 11.30ರ ಹೊತ್ತಿಗೆ ಕುಟುಂಬಸ್ಥರು ಅಂದರೆ ವಿಜಯ್ ಸಹೋದರ ಸಿದ್ದೇಶ್ ಹೇಳುತ್ತ ಕಣ್ಣೀರು ಹಾಕಿದಾಗಲೇ ವಿಜಯ್ ಉಳಿದಿಲ್ಲ ಎಂಬುದು ಖಚಿತವಾಗಿತ್ತು.
ಸಾಮಾನ್ಯವಾಗಿ ಅಂಗಾಂಗ ದಾನದ ಪ್ರಸ್ತಾಪವಾಗುವುದು ಮೃತಪಟ್ಟ ಮೇಲೆಯೇ. ಈ ಅಂಗಾಂಗ ದಾನ ಪ್ರಕ್ರಿಯೆ ವ್ಯಕ್ತಿಯ ಬ್ರೈನ್ ಡೆಡ್ ಆದ ಐದಾರು ಗಂಟೆಯಲ್ಲಿ ಮುಗಿಯಬೇಕು. ಇಲ್ಲವಾದಲ್ಲಿ ಅಂಗಾಂಗಗಳು ನಿಷ್ಕ್ರಿಯವಾಗುತ್ತವೆ ಎನ್ನುತ್ತಾರೆ ವೈದ್ಯರು.
ಸಿದ್ದೇಶ್ ಅವರು ಸೋಮವಾರ(ಜೂ.14) ಬೆಳಗ್ಗೆ ಮಾಧ್ಯಮಗಳ ಎದುರು ‘ವಿಜಯ್ ಪರೋಪಕಾರಿಯಾಗಿದ್ದ. ಹೀಗಾಗಿ ಅವರ ಅಂಗಾಂಗ ದಾನ ಮಾಡಲು ನಾವು ನಿರ್ಧರಿಸಿದ್ದೇವೆ. ಇನ್ನಾರು ಗಂಟೆ ಕಳೆದರೆ ಅಂಗಾಂಗ ದಾನವೂ ಸಾಧ್ಯವಾಗುವುದಿಲ್ಲ’ ಎಂದಿದ್ದರು. ಈ‌ ಮಾತನ್ನು ಆಸ್ಪತ್ರೆ ವೈದ್ಯರೂ ಹೇಳಿದ್ದರು.‌
ಸಿದ್ದೇಶ್ ಅವರ ಹೇಳಿಕೆ ಆಧರಿಸಿಯೇ ಮಾಧ್ಯಮಗಳು ‘ವಿಜಯ್‌ ಇನ್ನಿಲ್ಲ’ ಎಂದು ಸುದ್ದಿ ಬಿತ್ತರಿಸಲು ಆರಂಭಿಸಿದವು. ಆದರೆ, ಆಸ್ಪತ್ರೆ ಅಧಿಕೃತವಾಗಿ ಏನನ್ನೂ ಹೇಳಲೇ ಇಲ್ಲ. ಈಗ ಹೇಳಬಹುದು, ಆಗ ಹೇಳಬಹುದು ಎಂದು ಕಾದರೂ ಸಂಜೆಯಾದರೂ ಆಸ್ಪತ್ರೆ ಏನನ್ನೂ ಹೇಳಲಿಲ್ಲ. ಅಂತೂ ಮಂಗಳವಾರ ಬೆಳಗಿನ ಜಾವ ಆಸ್ಪತ್ರೆಯಿಂದ ಅಧಿಕೃತ ಸುದ್ದಿ ಹೊರಬಿದ್ದಿತ್ತು. ಎಂದಿನಂತೆ ಮಾಧ್ಯಮಗಳ ಸುದ್ದಿ ದಾಹ ಎಲ್ಲರ ಟೀಕೆಗೆ ಒಳಗಾಯಿತು.
ಆದರೆ, ಸೋಮವಾರ ಮಧ್ಯಾಹ್ನ 12:30ರ ಹೊತ್ತಿಗೆ ಹಿರಿಯ ನಟ ಸುದೀಪ್ ಟ್ವೀಟ್ ಮಾಡಿದರು. ಸಿಎಂ ಯಡಿಯೂರಪ್ಪ ಸಂತಾಪ ಸೂಚಿಸಿದರು. ಡಿಡಿ ಚಂದನ ಟ್ವೀಟ್ ಮಾಡಿತು. ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಸಿ.ಟಿ. ರವಿ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದರು. ರಾಜ್ಯದ ಎಲ್ಲ ಪ್ರಮುಖ ದಿನಪತ್ರಿಕೆಗಳ ವೆಬ್ ಸೈಟ್ ಗಳೂ ವಿಜಯ್ ಸಾವಿನ ಸುದ್ದಿ ಪ್ರಕಟಿಸಿದ್ದವು.
ಅಷ್ಟೇ ಅಲ್ಲ, ‘ವಿಜಯ್ ಜೀವಂತವಾಗಿದ್ದಾರೆ’ ಎಂದು ಸಾರುತ್ತಿದ್ದ ಪ್ರತಿಷ್ಠಿತ ಟಿವಿ ಚಾನೆಲ್’ವೊಂದು ಕೂಡ ತನ್ನದೇ ವೆಬ್ ಸೈಟ್ ನಲ್ಲಿ ಸೋಮವಾರ ಮಧ್ಯಾಹ್ನವೇ ನಿಧನವಾರ್ತೆಯನ್ನು ಪ್ರಕಟಿಸಿತ್ತು! ಅಷ್ಟೇ ಅಲ್ಲ, ಸೋಮವಾರ ಮಧ್ಯಾಹ್ನ ತಾನೇ ಚಾನೆಲ್ ನಲ್ಲಿ ಬಿತ್ತರಿಸಿದ ವಿಜಯ್ ಗೆ ಸಂಬಂಧಿಸಿದ ಕಾರ್ಯಕ್ರಮದಲ್ಲೂ ಸಾವನ್ನು ಘೋಷಿಸಿತ್ತು!

ಯಕ್ಷಪ್ರಶ್ನೆ:

ಇದೊಂದೇ ಪ್ರಕರಣವಲ್ಲ, ಈ ಹಿಂದೆಯೂ ಚಿರಂಜೀವಿ ಸರ್ಜಾ ಸೇರಿದಂತೆ ಕೆಲವು ಸ್ಟಾರ್‌ ನಟರು ಮಡಿದಾಗ, ವಿವಿಧ ಕ್ಷೇತ್ರದ ಸೆಲೆಬ್ರಿಟಿಗಳು ನಿಧನರಾದಾಗ, ಕಾರ್ಪೋರೇಟ್‌ ಆಸ್ಪತ್ರೆಗಳು ಅವರ ಸಾವಿನ ಸುದ್ದಿಯನ್ನು ದಿನಗಟ್ಟಲೆ ತಡೆಹಿಡಿದ ನಿದರ್ಶನಗಳಿವೆ. ಸಾವಾಗಿರುವುದು ಖಚಿತವಾಗಿದ್ದರೂ ಹೀಗೇಕೆ ಮಾಡುತ್ತವೆ ಎನ್ನುವುದು ಅನೇಕರಿಗೆ ಯಕ್ಷಪ್ರಶ್ನೆಯಾಗಿ ಕಾಡುತ್ತದೆ.
ಕಾರ್ಪೋರೇಟ್‌ ಆಸ್ಪತ್ರೆಗಳ ಕೆಲವು ಮೂಲಗಳ ಪ್ರಕಾರ, ನಿಧನವಾರ್ತೆಯನ್ನು ತಡವಾಗಿ ಬಿತ್ತರಿಸುವುದಕ್ಕೆ ಹಲವಾರು ಕಾರಣಗಳಿರುತ್ತವೆ. ಅಂಗಾಂಗ ದಾನಕ್ಕೆ ಸಂಬಂಧಿಸಿದ ಗೋಜಲುಗಳಿಂದಲೂ ನಿಧನವಾರ್ತೆಯನ್ನು ವಿಳಂಬವಾಗಿ ಪ್ರಕಟಿಸಬಹುದು.

ಅಂಗಾಂಗಕ್ಕೆ ಲಾಬಿ:

ಆ ವ್ಯಕ್ತಿಯ ಕುಟುಂಬಸ್ಥರು ಸಹಿ ಹಾಕಿದ ಮೇಲೆಯೂ ಗೋಜಲೇನು ಬಂತು ಎನ್ನಿಸಬಹುದು. ಆದರೆ, ಅಂಗಾಂಗಕ್ಕೆ ಇರುವ ಬೇಡಿಕೆಯನ್ನು ಗಮನಿಸಿದರೆ ಈ ಮಾತು ಸ್ಪಷ್ಟವಾಗುತ್ತದೆ. ಮನುಷ್ಯನ ಪ್ರತಿ ಅಂಗಾಂಗವೂ ಲಕ್ಷಗಟ್ಟಲೆ ಬೆಲೆಬಾಳುತ್ತದೆ. ಕೋಟಿ ರೂಪಾಯಿ ಕೊಡುತ್ತೇನೆಂದರೂ ಕೆಲವು ಅಂಗಾಂಗಗಳು ವರ್ಷಾನುಗಟ್ಟಲೆ ಸಿಗುವುದಿಲ್ಲ. ಅಷ್ಟು ಮೌಲ್ಯವುಳ್ಳವು ನಮ್ಮ ದೇಹದ ಅಂಗಾಂಗಗಳು. ಮಿದುಳು ಮೃತವಾಗಿ, ವ್ಯಕ್ತಿ ಬದುಕುವ ಸಾಧ್ಯತೆ ಇಲ್ಲವಾದಾಗ ಆಸ್ಪತ್ರೆಗಳಲ್ಲಿ ಅಂಗಾಂಗ ಪಡೆಯಲು ಪೈಪೋಟಿ ಆರಂಭವಾಗುತ್ತದೆ. ಕ್ರಮವಾಗಿ ಯಾರಿಗೆ ದಕ್ಕಬೇಕೋ ಆ ಕ್ರಮಾನುಗತಿ ಮೀರಿ ಅಂಗಾಂಗ ಪಡೆಯಲು ಲಾಬಿ ಶುರುವಾಗುತ್ತದೆ. ಅಂಥ ಸಂದರ್ಭದಲ್ಲೂ ನಿಧನವಾರ್ತೆಯನ್ನು ವಿಳಂಬವಾಗಿ ಪ್ರಕಟಿಸಲಾಗುತ್ತದೆ ಎನ್ನುವುದು ಅಚ್ಚರಿಯಾದರೂ ಸತ್ಯವೆನ್ನುವುದು ಬಲ್ಲವರ ಮಾತು.
ಅಷ್ಟೇ ಅಲ್ಲ, ದಾನಕ್ಕೆ ಸಿದ್ಧವಿರುವ ಅಂಗಾಂಗಗಳನ್ನು ವೇಯ್ಟಿಂಗ್ ಲಿಸ್ಟ್ ನಲ್ಲಿರುವ ಯಾವ ವ್ಯಕ್ತಿಗೆ ಹೊಂದಾಣಿಕೆಯಾಗುತ್ತದೆ ಎಂಬುದನ್ನು ಪರಿಶೀಲಿಸಲೂ ಸಮಯ ಬೇಕಾಗುತ್ತದೆ ಎಂಬ ವಿಚಾರವೂ ಇಲ್ಲಿ ಉಲ್ಲೇಖನೀಯ.
ಈ ಅಂಗಾಂಗ ದಾನದ ಚಿತ್ರಣ ವಿವರಿಸುವ ಸಿನಿಮಾಗಳೂ ಕೂಡ ಪ್ರದರ್ಶನ ಕಂಡಿವೆ. ಉದಾಹರಣೆಗೆ, ನಟ ಮಾಧವನ್ ಅಭಿನಯದ ‘ಬ್ರೀದ್’. ಹಾಗೆಯೇ ನಾಲ್ಕೈದು ವರ್ಷಗಳ ಹಿಂದೆ ಕೇರಳದಲ್ಲಿ ನಡೆದಿದ್ದ ಅಂಗಾಂಗಗಳನ್ನು ವಿದೇಶಗಳಿಗೆ ರವಾನಿಸುತ್ತಿದ್ದ ಹಗರಣ ಕೂಡ ಇಲ್ಲಿ ದಾಖಲಾರ್ಹ. ಈ ಹಗರಣವನ್ನಾಧರಿಸಿದ ಸಿನಿಮಾ ಕೂಡ ತೆರೆ ಕಂಡಿದೆ.

ಮೀಡಿಯಾ ಅಟ್ರ್ಯಾಕ್ಷನ್ ಹಂಬಲ:

ಇನ್ನು, ಕಾರ್ಪೋರೇಟ್‌ ಆಸ್ಪತ್ರೆಗಳು ತಮ್ಮ ಬ್ರ್ಯಾಂಡ್‌ ನೇಮ್‌ ಅನ್ನು ಹೆಚ್ಚು ಕಾಲ ಪ್ರಚಲಿತದಲ್ಲಿ ಇರಿಸಿಕೊಳ್ಳಲೂ ಸಹ ಅಂದರೆ ನಿಧನವಾರ್ತೆ ಅಧಿಕೃತವಾಗಿ ವೈದ್ಯರು ಹೇಳುವವರೆಗೂ ಮಾಧ್ಯಮದವರು ಆ ಆಸ್ಪತ್ರೆ ಎದುರು ಕಾಯುತ್ತಿರುತ್ತಾರೆ. ನಿಧನವಾರ್ತೆಯನ್ನು ತಕ್ಷಣ ಪ್ರಕಟಿಸಿಬಿಟ್ಟರೆ ಅಲ್ಲಿ ಯಾವ ಮಾಧ್ಯಮದವರೂ ನಿಲ್ಲುವುದಿಲ್ಲ. ಹೀಗಾಗಿ, ಹೆಚ್ಚು ಹೊತ್ತು ಸೆಂಟರ್ ಆಫ್ ಮೀಡಿಯಾ ಅಟ್ರ್ಯಾಕ್ಷನ್ ಉಳಿಸಿಕೊಳ್ಳಲು ಸೆಲೆಬ್ರಿಟಿಗಳ ನಿಧನವಾರ್ತೆಯನ್ನು ನಿಧಾನವಾಗಿ ಪ್ರಕಟಿಸುತ್ತವೆ ಎನ್ನುವ ಆರೋಪಗಳೂ ಇವೆ.
ಸ್ವತಃ ವೈದ್ಯರೊಬ್ಬರ ತಂದೆ ಮಾಜಿ ಸಚಿವರು ತೀರಿಹೋದಾಗಿನ ಒಂದು ಪ್ರಕರಣ. ತಂದೆ ನಿಧನರಾಗಿದ್ದಾರೆಂದು ಅವರಿಗೆ ತಿಳಿದಿದ್ದರೂ ತಾಯಿಯವರ ಆಸೆಯಂತೆ ಇನ್ನೊಂದು ಆಸ್ಪತ್ರೆಯ ದೃಢೀಕರಣ ಅನಿವಾರ್ಯವಾದ್ದರಿಂದ ಅವರು ಮೃತ ತಂದೆಯನ್ನು ಇನ್ನೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಒಂದು ರಾತ್ರಿಯಿಡೀ ಅವರನ್ನು ಐಸಿಯುನಲ್ಲಿ ಇರಿಸಿಕೊಂಡ ಆ ಕಾರ್ಪೋರೇಟ್‌ ಆಸ್ಪತ್ರೆ, ಮಾರನೆಯ ದಿನ ಸಂಜೆಯ ವೇಳೆಗೆ ನಿಧನವಾರ್ತೆ ಪ್ರಕಟಿಸಿ ಅವರಿಂದ ಲಕ್ಷಗಟ್ಟಲೆ ರೂಪಾಯಿ ವಸೂಲಿ ಮಾಡಿತ್ತು! ದುಡ್ಡಿನ ದಾಹದಿಂದ ಇಂಥದ್ದೂ ಸಂಭವಿಸಬಹುದು.

ಮಾನವೀಯ ಕಳಕಳಿ:

ಸಾವು ಹೇಗೆ ಸಂಭವಿಸಿದರೂ ಸಾವೇ. ಅದನ್ನು ಗೌರವಿಸುತ್ತ, ಅವರ ಕುಟುಂಬಸ್ಥರನ್ನು ಸತಾಯಿಸದೆ ಅವರಿಗೂ ಗೌರವ ನೀಡುವುದು ಸಮಾಜದ ಎಲ್ಲ ವ್ಯವಸ್ಥೆಗಳ ಆದ್ಯತೆಯಾಗಬೇಕು ಎನ್ನುವುದು ಮಾನವೀಯ ಕಳಕಳಿ.

ಮತ್ತಷ್ಟು ಸುದ್ದಿಗಳು

vertical

Latest News

ಕೇಂದ್ರ ಜಲ ಆಯೋಗದ ಅಧ್ಯಕ್ಷರಾಗಿ ಚಂದ್ರಶೇಖರ್ ಅಯ್ಯರ್

newsics.com ನವದೆಹಲಿ: ಜಲ ತಜ್ಞ ಚಂದ್ರಶೇಖರ್ ಅಯ್ಯರ್ ಅವರು ‘ಕೇಂದ್ರ ಜಲ ಆಯೋಗದ’  ಮುಂದಿನ ಅಧ್ಯಕ್ಷರಾಗಿ ನಿಯುಕ್ತಿಯಾಗಿದ್ದಾರೆ. ಗುರುವಾರ ಡಿಸೆಂಬರ್ 1 ರಿಂದ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಚಂದ್ರಶೇಖರ್...

KSRTC ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ ಬಹುಮಾನ ಗೆಲ್ಲಿ

newsics.com ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನೂತನವಾಗಿ ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ  ಬಹುಮಾನ ಗೆಲ್ಲ  ಬಹುದಾಗಿದೆ. ಮಲ್ಟಿ ಆ್ಯಕ್ಸೆಲ್ ಸ್ಲೀಪರ್ ಹಾಗೂ ವಿದ್ಯುತ್ ಚಾಲಿತ ವಾಹನ ಗಳಿಗೆ ಸಾರ್ವಜನಿಕರು ಹಾಗೂ ಪ್ರಯಾಣಿಕರಿಂದ...

ವಿಚಿತ್ರ ಹಬ್ಬದ ಆಚರಣೆ- ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ

newsics.com ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಸೋಮೇಶ್ವರ ದೇವರ ಜಾತ್ರೆಯಲ್ಲಿ ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ ಮಾಡುವ ವಿಶಿಷ್ಟ ಆಚರಣೆ ಕಂಡು ಬರುತ್ತದೆ. ಪ್ರತಿವರ್ಷ ಛಟ್ಟಿ ಅಮವಾಸ್ಯೆಯ ಆಸುಪಾಸು ನಡೆಯುವ...
- Advertisement -
error: Content is protected !!