
ಚೆನ್ನೈ: ಗಾನ ಗಾರುಡಿಗ, ಸಂಗೀತ ಸಾಧಕ, ಸ್ವರದಲ್ಲೇ ತಲ್ಲೀನರಾಗಿದ್ದ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಇನ್ನು ನೆನಪು ಮಾತ್ರ.
ಶುಕ್ರವಾರ ನಿಧನರಾದ ಎಸ್ಪಿಬಿ ಅವರ ಅಂತ್ಯಕ್ರಿಯೆ ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯ ತಾಮರೈಪಾಕಂನ ರೆಡ್ ಹಿಲ್ಸ್ ಫಾರ್ಮ್ ಹೌಸ್ ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಶನಿವಾರ ಮಧ್ಯಾಹ್ನ 12.30ರ ಸುಮಾರಿಗೆ ನೆರವೇರಿತು.
ತೆಲುಗು ಬ್ರಾಹ್ಮಣ ಸಂಪ್ರದಾಯದ ವಿಧಿವಿಧಾನಗಳ ಮೂಲಕ ಸ್ವರ ಸಾಮ್ರಾಟನಿಗೆ ಅಂತಿಮ ವಿದಾಯ ಹೇಳಲಾಯಿತು.
ಪುತ್ರ ಚರಣ್ ಅಂತಿಮ ವಿಧಿ ವಿಧಾನ ನೆರವೇರಿಸಿದರು. ಎಸ್ ಪಿ ಬಾಲಸುಬ್ರಹ್ಮಣ್ಯಂ ಗೌರವಾರ್ಥವಾಗಿ ತಮಿಳುನಾಡು ಪೊಲೀಸ್ ಪಡೆ ಕುಶಾಲು ತೋಪು ಸಿಡಿಸಿ ಗೌರವ ಸಲ್ಲಿಸಿತು.
ಇದಕ್ಕೂ ಮೊದಲು ಅವರ ರೆಡ್ ಹಿಲ್ಸ್ ಫಾರ್ಮ್ ಹೌಸ್ ನಲ್ಲಿ ಸಾರ್ವಜನಿಕರ ದರ್ಶನಕ್ಕೆ ಎಸ್ ಪಿ ಬಿ ಅವರ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು. ಸಾವಿರಾರು ಅಭಿಮಾನಿಗಳು ಅಗಲಿದ ಪ್ರೀತಿಯ ಗಾಯಕನಿಗೆ ಅಂತಿಮ ನಮನ ಸಲ್ಲಿಸಿದ್ದರು.
ಕನ್ನಡಿಗರನ್ನು ತಮ್ಮ ಹಾಡಿನ ಮೋಡಿಯಿಂದ ವಿಸ್ಮಯಗೊಳಿಸಿದ್ದ ಎಸ್ ಪಿ ಬಾಲಸುಬ್ರಹ್ಮಣ್ಯಂ ಇದೀಗ ಎಲ್ಲರಿಂದ ದೂರವಾಗಿದ್ದಾರೆ. ಆದರೆ ಅವರ ಸ್ವರ, ಹಾಡು ನಮ್ಮಲ್ಲಿ ಸದಾ ಅಮರ… ನೆನಪು ಶಾಶ್ವತ.