Saturday, April 17, 2021

ವಿಶ್ವವ್ಯಾಪಾರದ ಸಂಗಾತಿ ಸುಯೆಜ್


ರೌಂಡ್ ಟೇಬಲ್

ವಿಶ್ವವ್ಯಾಪಾರದ ಪ್ರಮುಖ ಜಲಮಾರ್ಗ ಸುಯೆಜ್ ನಾಲ್ಕೇ ದಿನ  ಬಂದ್ ಆದರೂ ವ್ಯಾಪಾರ ಜಗತ್ತಿನ ಉಸಿರುಕಟ್ಟಿದಂತಾಗುತ್ತದೆ. ಪೂರ್ವ ಮತ್ತು ಪಶ್ಚಿಮ ದೇಶಗಳ ನಡುವೆ ಸಂಪರ್ಕ ಕಲ್ಪಿಸುವ ಸುಯೆಜ್, ಎರಡು ಖಂಡಗಳನ್ನು ಬೆಸೆಯುವ ಕೆಲಸ ಮಾಡುತ್ತದೆ.

newsics.com Features Desk

ಕೊರೋನಾ ಕರಾಳ ದಿನಗಳಲ್ಲಿ ಎಲ್ಲ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಿದೆ. ಇದರ ನಡುವೆ, ಕಳೆದ ವಾರ ಬೆಲೆ ಏರಿಕೆಯ ಇನ್ನೂ ಒಂದು ಆತಂಕ ಭಾರತಕ್ಕೆ ಆರಂಭವಾಗಿತ್ತು. ಅದೃಷ್ಟವಶಾತ್, ಆ ಆತಂಕ ಈಗ ದೂರವಾಗಿದೆ. ಸುಯೆಜ್ ಕಾಲುವೆಯಲ್ಲಿ ಸಿಲುಕಿದ್ದ ಬೃಹತ್ ಸರಕು ಹಡಗು ಮುಂದೆ ಚಲಿಸಲುತೊಡಗಿದ್ದು, ಅಲ್ಲಿ ಸೃಷ್ಟಿಯಾಗಿದ್ದ ಟ್ರಾಫಿಕ್ ಜಾಮ್ ಸಮಸ್ಯೆ ನಿವಾರಣೆಯಾಗಿದೆ. ಇಲ್ಲವಾದಲ್ಲಿ ವಿಶ್ವದ ಅನೇಕ ರಾಷ್ಟ್ರಗಳಿಗೆ ಇದರ ಬಿಸಿ ತಟ್ಟುತ್ತಿತ್ತು.
ಹೌದು, ಒಂದೊಮ್ಮೆ ಯಾವುದಾದರೂ ಕಾರಣದಿಂದ ಸುಯೆಜ್ ಕಾಲುವೆ ಸ್ಥಗಿತವಾದರೆ ವಿಶ್ವದ ವ್ಯಾಪಾರ- ವ್ಯವಹಾರದಲ್ಲಿ ಅಲ್ಲೋಲಕಲ್ಲೋಲವಾಗುತ್ತದೆ. ಕೆಲ ದಿನಗಳ ಮಟ್ಟಿಗೆ ಸ್ಥಗಿತವಾದರೂ ಆರ್ಥಿಕತೆಗೆ ಅಪಾರ ಹೊಡೆತ ಬೀಳುತ್ತದೆ. ಬಡ ರಾಷ್ಟ್ರಗಳು ಕಂಗಾಲಾಗುತ್ತವೆ, ಜನಬಾಹುಳ್ಯ ರಾಷ್ಟ್ರಗಳಲ್ಲಿ ಬೆಲೆ ಏರಿಕೆಯಾಗಲೂಬಹುದು. ಇತ್ತೀಚೆಗೆ ಸುಯೆಜ್ ಕಾಲುವೆಯಲ್ಲಿ ಎವರ್ ಗಿವನ್ ಹಡಗು ಸಿಲುಕಿದ್ದರಿಂದ ಸರಕು ಹಡಗುಗಳು ನಿಂತಲ್ಲಿಯೇ ನಿಂತ ಪರಿಣಾಮವಾಗಿ ದಿನಕ್ಕೆ ಸುಮಾರು 9.6 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟವಾಗಿತ್ತು! ಅಷ್ಟರಮಟ್ಟಿಗೆ ಜಗತ್ತಿನ ಪ್ರಮುಖ ಹಾಗೂ ಅತಿ ದಟ್ಟಣೆಯ ಜಲಮಾರ್ಗ ಸುಯೆಜ್ ಕಾಲುವೆ.
ವಿಶ್ವವ್ಯಾಪಾರಕ್ಕೆ ಸುಯೆಜ್ ಕಾಲುವೆ ಮಹತ್ವದ್ದು:
ಆಧುನಿಕ ಜಗತ್ತಿಗೆ ಈಜಿಪ್ಟ್’ನ ಕೊಡುಗೆಯೇನು ಎಂದರೆ ನಿರಾಯಾಸವಾಗಿ ಸುಯೆಜ್ ಕಾಲುವೆ ಎನ್ನಬಹುದು. ಪೂರ್ವ ಮತ್ತು ಪಶ್ಚಿಮ ರಾಷ್ಟ್ರಗಳನ್ನು ಬೆಸೆಯುವ ಮೂಲಕ ಈ ರಾಷ್ಟ್ರಗಳ ನಡುವಿನ ವ್ಯಾಪಾರವನ್ನು ಸುಲಭವಾಗಿಸಿಕೊಟ್ಟ ಹೆಗ್ಗಳಿಕೆ ಇದರದ್ದು. ಸುಯೆಜ್ ನಿರ್ಮಾಣಕ್ಕೂ ಮುನ್ನ ಯುರೋಪ್ ಮತ್ತು ಏಷ್ಯಾ ರಾಷ್ಟ್ರಗಳ ಹಡಗುಗಳು ಆಫ್ರಿಕಾದ ದಕ್ಷಿಣದ ತುತ್ತತುದಿ ಗುಡ್ ಹೋಪ್ ಭೂಶಿರದ ಮಾರ್ಗವಾಗಿ ಸಂಚರಿಸುತ್ತಿದ್ದವು. ಇದರಿಂದ ಅಪಾರ ಸಮಯ ಬೇಕಾಗುವುದರ ಜತೆಗೆ ವೆಚ್ಚವೂ ಅಧಿಕವಾಗುತ್ತಿತ್ತು.
ವಿವಾದದಲ್ಲಿ ಸುಯೆಜ್:
ಮಾನವ ನಿರ್ಮಿತ ವಿಶ್ವದ ಪ್ರಥಮ ಕಾಲುವೆ ಸುಯೆಜ್. ಮೆಡಿಟರೇನಿಯನ್ ಮತ್ತು ಕೆಂಪು ಸಮುದ್ರದ ಬಂದರುಗಳನ್ನು ಬೆಸೆಯುವುದರ ಜತೆಗೆ ಎರಡು ಖಂಡಗಳನ್ನೂ ಒಂದುಗೂಡಿಸುತ್ತದೆ ಎನ್ನುವುದು ವಿಶೇಷ. ಕ್ರಿಸ್ತಪೂರ್ವದಲ್ಲೇ ಕಾಲುವೆ ನಿರ್ಮಾಣದ ರೂಪುರೇಷೆ ಆರಂಭವಾಗಿತ್ತು ಎನ್ನುವುದು ಇತಿಹಾಸದ ದಾಖಲೆಯಿಂದ ತಿಳಿದುಬರುತ್ತದೆ. ಫ್ರಾನ್ಸ್ ಚಕ್ರವರ್ತಿ ನೆಪೋಲಿಯನ್ ಬೋನಾಪಾರ್ಟೆ ಇದರ ನಿರ್ಮಾಣಕ್ಕೆ ಆಸಕ್ತಿ ತೋರಿಸಿದ್ದ.  1858ರಲ್ಲಿ ಸೂಯೆಜ್ ಶಿಪ್ ಕಂಪನಿ ಇದರ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿತು. ಹಲವಾರು ಅಡೆತಡೆಗಳ ನಡುವೆಯೂ 1869ರಲ್ಲಿ ಸುಯೆಜ್ ಕಾಲುವೆಯನ್ನು ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಮುಕ್ತಗೊಳಿಸಲಾಯಿತು. ಇಷ್ಟು ಪ್ರಮುಖ ಜಲಮಾರ್ಗದ ಮೇಲೆ ವಿಶ್ವದ ಬಲಿಷ್ಠ ರಾಷ್ಟ್ರಗಳು ಕಣ್ಣು ಹಾಕದೇ ಇರುತ್ತವೆಯೇ? ಅಂಥ ಸಂದರ್ಭವೂ ದಟ್ಟವಾಗಿತ್ತು. ಏಕೆಂದರೆ, ನಿರ್ಮಾಣ ಕಂಪನಿಯಲ್ಲಿ ಫ್ರೆಂಚ್ ಮತ್ತು ಬ್ರಿಟಿಷ್ ಸರ್ಕಾರ ಪಾಲು ಹೊಂದಿದ್ದವು. 1936ರಲ್ಲಿ ಏರ್ಪಟ್ಟ ಒಂದು ಒಪ್ಪಂದದ ಪ್ರಕಾರ, ಬ್ರಿಟಿಷ್ ಸರ್ಕಾರ ಸುಯೆಜ್ ಕಾಲುವೆಯುದ್ದಕ್ಕೂ ತನ್ನ ರಕ್ಷಣಾ ಪಡೆಯನ್ನು ಹಾಕಿತ್ತು. 1956ರಲ್ಲಿ ಈಜಿಪ್ಟ್ ಸುಯೆಜ್ ಕಾಲುವೆಯನ್ನು ರಾಷ್ಟ್ರೀಕರಣಗೊಳಿಸಿತು. ಪರಿಣಾಮವಾಗಿ, ಫ್ರಾನ್ಸ್ ಮತ್ತು ಬ್ರಿಟನ್ ಜತೆಗೆ ಬಿಕ್ಕಟ್ಟು ಆರಂಭವಾಯಿತು.
ಬಳಿಕ, 1957ರಲ್ಲಿ ವಿಶ್ವಸಂಸ್ಥೆಯ ಮಧ್ಯಪ್ರವೇಶದಿಂದ ಈ ಬಿಕ್ಕಟ್ಟು ಅಂತ್ಯವಾಯಿತು. ಅಮೆರಿಕದ ಶಾಂತಿಪಾಲನಾ ಪಡೆ ನಿಯೋಜಿಸಿದ ವಿಶ್ವದ ಮೊದಲ ಪ್ರಕರಣ ಇದಾಗಿದೆ ಎಂದರೆ ಅಚ್ಚರಿಯಾಗಬಹುದು. ಆದರೆ, ಸುಯೆಜ್ ಕಾಲುವೆಯ ಕುರಿತಾದ ಈಜಿಪ್ಟ್ ಮತ್ತು ಇಸ್ರೇಲ್ ಸಂಘರ್ಷ ಹಲವು ವರ್ಷಗಳ ಕಾಲವೂ ಮುಂದುವರಿದಿತ್ತು.
ಈಜಿಪ್ಟ್ ಗೆ ಸುಯೆಜ್ ಆಧಾರ:  
ಇಂದು ಈಜಿಪ್ಟ್ ಗೆ ಶೇ.25ರಷ್ಟು ವರಮಾನ ತಂದುಕೊಡುತ್ತದೆ ಸುಯೆಜ್. ಇಲ್ಲಿ ಪ್ರತಿದಿನ 50ಕ್ಕೂ ಹೆಚ್ಚು ಹಡಗುಗಳು ಸಂಚರಿಸುತ್ತವೆ. ಜಾಗತಿಕ ವ್ಯಾಪಾರದ ಶೇ.12ರಷ್ಟು ಪ್ರಮಾಣ ಸುಯೆಜ್ ಮೂಲಕವೇ ಜರುಗುತ್ತದೆ. 120 ಮೈಲಿ ಅಥವಾ 193 ಕಿಲೋಮೀಟರ್ ಉದ್ದವಿರುವ ಈ ಕಾಲುವೆಯ ಅಕ್ಕಪಕ್ಕ ವಿವಿಧ ಗಾತ್ರದ 10 ಸಾವಿರಕ್ಕೂ ಅಧಿಕ ವಾಣಿಜ್ಯ ಮತ್ತು ಕೈಗಾರಿಕಾ ಘಟಕಗಳಿವೆ. 1967ರಲ್ಲಿ ಸಂಭವಿಸಿದ್ದ ಬಿಕ್ಕಟ್ಟಿನ ಪರಿಣಾಮವಾಗಿ, ಯುದ್ಧದ ಸ್ಥಿತಿ ತಲೆದೋರಿತ್ತು. ಆಗ ಇಲ್ಲಿನ ಜನರೆಲ್ಲರೂ ಪ್ರದೇಶ ತೊರೆದಿದ್ದರು. ಕಾಲುವೆಯನ್ನು 1975ರಲ್ಲಿ ಪುನರ್ ತೆರೆದ ಬಳಿಕ 1978ರಲ್ಲಿ ಜನರೆಲ್ಲ ಮರಳಿದ ಬಳಿಕ ವಾಣಿಜ್ಯ ಚಟುವಟಿಕೆ ಬಿರುಸುಗೊಂಡಿದೆ.
ಕಾಲುವೆ ಕೆಳಗೆ ಸುರಂಗ!
2014ರ ವಿಸ್ತರಣೆ ಯೋಜನೆ ಪ್ರಕಾರ, ಈಜಿಪ್ಟ್ ಸರ್ಕಾರ ಸುಯೆಜ್ ಕಾಲುವೆಯ ಕೆಳಗೆ ಕಾರು ಮಾರ್ಗದ ಸುರಂಗವನ್ನು ಸಹ ನಿರ್ಮಾಣ ಮಾಡಿದೆ. ಇದು 2019ರಲ್ಲಿ ಸಂಚಾರಕ್ಕೆ ಮುಕ್ತಗೊಂಡಿದೆ.

ಮತ್ತಷ್ಟು ಸುದ್ದಿಗಳು

Latest News

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ...

ಕೇಂದ್ರ ಸಚಿವ ಕಿರೆನ್ ರಿಜಿಜುಗೆ ಕೊರೋನಾ ಸೋಂಕು

newsics.com ನವದೆಹಲಿ: ಕೇಂದ್ರ ಸಚಿವ ಕಿರೆನ್ ರಿಜಿಜು ಅವರಿಗೆ ಶನಿವಾರ ಕೊರೋನಾ ಸೋಂಕು ತಗುಲಿದೆ. ಈ ವಿಷಯವನ್ನು ಸ್ವತಃ ಸಚಿವ ಕಿರೆನ್ ರಿಜಿಜು ಅವರೇ ತಿಳಿಸಿದ್ದಾರೆ. ಟ್ವಿಟರ್ ನಲ್ಲಿ ಈ‌ ಮಾಹಿತಿ ಹಂಚಿಕೊಂಡಿರುವ ರಿಜಿಜು,...

ಕೊರೋನಾ ಸೋಂಕಿತರ ಚಿಕಿತ್ಸೆಗೆ ‌ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆ ಇಳಿಕೆ

newsics.com ನವದೆಹಲಿ: ಕೊರೋನಾ ಸೋಂಕಿತ ರೋಗಿಗಳ ಚಿಕಿತ್ಸೆಗೆ ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆಯನ್ನು ಫಾರ್ಮಾ ಕಂಪೆನಿಗಳು ‌ಸ್ವಪ್ರೇರಣೆಯಿಂದ ಇಳಿಕೆ ಮಾಡಿವೆ. ಕೆಡಿಲಾ ಕಂಪನಿಯು ತನ್ನ ರೆಮ್ಡೆಕ್ ಬ್ರಾಂಡಿನ ರೆಮ್ಡೆಸಿವಿರ್ ಬೆಲೆಯನ್ನು 2800 ರೂ.ನಿಂದ 899 ರೂಪಾಯಿಗೆ...
- Advertisement -
error: Content is protected !!