newsics.com
ನವದೆಹಲಿ: ಖಾಸಗಿ ರೈಲುಗಳ ಪ್ರಯಾಣ ದರವನ್ನು ಆಯಾ ನಿರ್ವಹಣಾ ಸಂಸ್ಥೆಗಳೇ ನಿಗದಿಪಡಿಸಲಿವೆ.
ದೇಶದಲ್ಲಿ ತಾವು ನಿರ್ವಹಿಸುವ ರೈಲ್ವೆ ಸೇವೆಗಳಿಗೆ ಪ್ರತ್ಯೇಕ ಪ್ರಯಾಣ ದರ ನಿಗದಿಪಡಿಸಲು ಖಾಸಗಿ ಸಂಸ್ಥೆಗಳಿಗೆ ಸ್ವಾತಂತ್ರ್ಯ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ. ಯಾದವ್ ಈ ಬಗ್ಗೆ ಮಾತನಾಡಿದ್ದು, ಖಾಸಗಿ ರೈಲ್ವೆ ಸೇವೆ ನೀಡುವ ಕಂಪನಿಗಳು ತಮ್ಮಿಚ್ಛೆಯ ಪ್ರಯಾಣ ದರ ನಿಗದಿ ಮಾಡಬಹುದು. ಆದರೆ, ರೈಲ್ವೆ ಪ್ರಯಾಣ ದರವನ್ನು ಯೋಚಿಸಿ ನಿಗದಿ ಮಾಡಬೇಕು ಎಂದು ಹೇಳಿದ್ದಾರೆ.
ಯೋಜನೆ ಬಗ್ಗೆ ಅಲ್‌ಸ್ಟೋಮ್ ಎಸ್‌ಎ, ಅದಾನಿ ಎಂಟರ್‌ಪ್ರೈಸಸ್, ಜಿಎಂಆರ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಹಾಗೂ ಬೊಂಬಾರ್ಡಿಯರ್ ಇಂಕ್ ಒಲವು ವ್ಯಕ್ತಪಡಿಸಿದೆ. ಮುಂದಿನ 5 ವರ್ಷಗಳಲ್ಲಿ ರೈಲ್ವೆ ಕ್ಷೇತ್ರಕ್ಕೆ 7.5 ಬಿಲಿಯನ್ ಡಾಲರ್ (ಸುಮಾರು 50 ಸಾವಿರ ಕೋಟಿ ರೂಪಾಯಿ) ಬಂಡವಾಳ ಹರಿದುಬರುವ ನಿರೀಕ್ಷೆ ಇದೆ.
ಈ ಮಧ್ಯೆ, ಜುಲೈನಲ್ಲಿ 151 ರೈಲುಗಳ ಮೂಲಕ 109 ಮೂಲ ಗಮ್ಯಸ್ಥಾನದ ಮಾರ್ಗಗಳಲ್ಲಿ ಪ್ರಯಾಣಿಕರ ರೈಲುಗಳನ್ನು ಓಡಿಸುವ ಬಗ್ಗೆ ತಮ್ಮ ಆಸಕ್ತಿ ಬಗ್ಗೆ ತಿಳಿಸುವಂತೆ ಕೇಂದ್ರ ಸರ್ಕಾರ ಖಾಸಗಿ ಕಂಪನಿಗಳಿಗೆ ಸೂಚಿಸಿದೆ.
ವಿಶ್ವದ ಅತಿದೊಡ್ಡ ರೈಲ್ವೆ ನೆಟ್ವರ್ಕ್ ಹೊಂದಿರುವ ಭಾರತೀಯ ರೈಲ್ವೆಯ ಪ್ರಯಾಣ ದರ ತೀರಾ ಅಗ್ಗ ಇದೆ. ಆದರೆ, ಇದೇ ಕಾರಣಕ್ಕೆ ಮೂಲಸೌಕರ್ಯದ ಗುಣಮಟ್ಟ ಹೆಚ್ಚಿಸಲು ಸಾಧ್ಯವಾಗದೆ ಇಲಾಖೆ ಬಳಲುತ್ತಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸರ್ಕಾರಕ್ಕೂ ರೈಲ್ವೆಯನ್ನು ನಿರ್ವಹಿಸುವುದು ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ರೈಲ್ವೆಯನ್ನು ಖಾಸಗೀಕರಣ ಮಾಡುವತ್ತ ಕೇಂದ್ರ ಸರ್ಕಾರ ಹೆಜ್ಜೆ ಇರಿಸಿದೆ.
ಪ್ರಯಾಣ ದರ ನಿಗದಿಗೆ ಖಾಸಗಿ ರೈಲು ಸಂಸ್ಥೆಗಳಿಗೆ ಕೇಂದ್ರ ಸ್ವಾತಂತ್ರ್ಯ
Follow Us