ಶ್ರೀನಗರ: ಮೂರು ದಿನಗಳ ಹಿಂದೆ ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಓರ್ವ ಸಿಆರ್ ಪಿಎಫ್ ಯೋಧ ಮತ್ತು ಆರು ವರ್ಷದ ಬಾಲಕನನ್ನು ಗುಂಡಿಕ್ಕಿ ಸಾಯಿಸಿದ ಇಬ್ಬರು ಉಗ್ರರನ್ನು ಯಮಪುರಿಗೆ ಅಟ್ಟಲಾಗಿದೆ. ಅನಂತ್ ನಾಗ್ ಜಿಲ್ಲೆಯ ವಗಾಂ ಸಮೀಪದ ಬ್ರಿಜ್ ಬೆಹ್ರಾ ಎಂಬಲ್ಲಿ ಹೆದ್ದಾರಿ ಗಸ್ತು ನಡೆಸುತ್ತಿದ್ದ ಸಿಆರ್ ಪಿಎಫ್ ಯೋಧರ ಮೇಲೆ ಬೈಕ್ ನಲ್ಲಿ ಬಂದ ಇಬ್ಬರು ಉಗ್ರರು ಗುಂಡು ಹಾರಿಸಿ ಪರಾರಿಯಾಗಿದ್ದರು. ಈ ಗುಂಡಿನ ದಾಳಿಯಲ್ಲಿ ಆರು ವರ್ಷದ ಬಾಲಕ ಕೂಡ ಮೃತಪಟ್ಟಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಮಹಾರಾಷ್ಟ್ರದ ಸೊಲ್ಲಾಪುರದ ಯೋಧ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇದೀಗ ಹುತಾತ್ಮ ಯೋಧನ ಬಲಿದಾನಕ್ಕೆ ಸೇನೆ ಪ್ರತೀಕಾರ ತೀರಿಸಿದೆ. ಮೂರೇ ದಿನಗಳಲ್ಲಿ ಈ ಇಬ್ಬರು ಭಯೋತ್ಪಾದಕರನ್ನು ಯಮಪುರಿಗೆ ಅಟ್ಟಿದೆ.
ಇನ್ನೊಂದೆಡೆ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಕಿರಿಕ್ ಮುಂದುವರಿದಿದೆ. ಬಾರಮುಲ್ಲಾ ಜಿಲ್ಲೆಯ ನೌಗಾಂ ವಲಯದಲ್ಲಿ ಕದನ ವಿರಾಮ ಉಲ್ಲಂಘಿಸಿದೆ. ಭಾರತದ ಸೇನಾ ನೆಲೆಗಳನ್ನು ಗುರಿಯಾಗಿರಿಸಿಕೊಂಡು ಮೋರ್ಟರ್ ದಾಳಿ ನಡೆಸಿದೆ. ಭಾರತದ ಯೋಧರು ಕೂಡ ಇದಕ್ಕೆ ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ