newsics.com
ಬೆಂಗಳೂರು: ಬೆಂಗಳೂರಿನ ಪೊಲೀಸ್ ಠಾಣೆಯ ಸಿಬ್ಬಂದಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದಿರುವ ಪತ್ರ ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಿಂದ ಕರ್ನಾಟಕದ ಪೊಲೀಸರಿಗೆ ತೀವ್ರ ಮುಜುಗರ ಉಂಟಾದ ಘಟನೆ ನಡೆದಿದೆ.
ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯ ಪೊಲೀಸರು ರಾಷ್ಟ್ರಪತಿಗೆ ಒಂಬತ್ತು ಪುಟಗಳ ಪತ್ರವನ್ನು ಬರೆದಿದ್ದಾರೆ, ಆ ಪತ್ರದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಉಸ್ತುವಾರಿ ಶರಣಗೌಡ ಎಂಬವರು ಕೆಳಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹಣವನ್ನು ಲಪಟಾಯಿಸಿ ತನಗೆ ನೀಡುವಂತೆ ಪೀಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪೊಲೀಸ್ ಇನ್ಸ್‌ಪೆಕ್ಟರ್ ಬಳಿ ರಜೆ ಕೇಳಿದ್ರೆ, ಠಾಣೆಯಲ್ಲಿ ಭ್ರಷ್ಟಾಚಾರ ಮತ್ತು ಲಂಚದ ಮೂಲಕ ಹಣವನ್ನು ಪಡೆಯಲು ಸಾಧ್ಯವಾದವರು ಮಾತ್ರ ರಜೆ ಪಡೆಯಬಹುದು. ಯಾರೇ ಹಣ ಕೊಟ್ಟರೂ ಅವರಿಗೆ ರಜೆ ಮತ್ತು ಇತರೆ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದಷ್ಟೇ ಅಲ್ಲ ಇನ್ಸ್‌ಪೆಕ್ಟರ್ ತಮ್ಮ ಹೆಂಡತಿಯನ್ನು ಠಾಣೆಗೆ ಕರೆತಂದು, ಚೇಂಬರ್‌ನಲ್ಲಿ ಆಕೆಯೊಂದಿಗೆ ಮಾತುಕತೆ ಮಾಡುತ್ತಾರೆ ಹಾಗೂ ತಮ್ಮ ಮಕ್ಕಳನ್ನು ಇಲಾಖೆಯ ವಾಹನಗಳಲ್ಲಿ ಈಜುಕೊಳಕ್ಕೆ ಕರೆದೊಯ್ಯುತ್ತಾರೆ. ಹಣ ವಸೂಲಿ ಮಾಡದ ಸಿಬ್ಬಂದಿಗೆ ಕಿರುಕುಳ ನೀಡುತ್ತಾರೆ.
ಋತುಚಕ್ರದ ಸಮಯದಲ್ಲಿ ಮಹಿಳಾ ಸಿಬ್ಬಂದಿ ರಜೆ ಕೇಳಿದ್ರೆ, ರಾಜೀನಾಮೆ ನೀಡಿ ಮನೆಗೆ ಹೋಗಿ ಅಂತಾರೆ. ಇದಲ್ಲದೇ ಅವರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ ಮತ್ತು ಮನೆಗೆ ಆಹ್ವಾನಿಸಿದ್ದಾರೆ. ಮೀಟಿಂಗ್‌ಗಳಲ್ಲಿ, ತಮ್ಮ ಪೋಸ್ಟಿಂಗ್‌ಗಾಗಿ 25 ಲಕ್ಷ ರೂ.ಗಳನ್ನು ನೀಡಿರುವುದಾಗಿ ಬಹಿರಂಗವಾಗಿ ಘೋಷಿಸುತ್ತಾರೆ ಮತ್ತು ಸಿಬ್ಬಂದಿಯ ತೊಂದರೆಗಳನ್ನು ಕೇಳಲು ಇಲ್ಲಿಗೆ ಬಂದಿಲ್ಲ ಎನ್ನುತ್ತಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈಗಾಗಲೇ ಪೊಲೀಸ್ ಇನ್ಸ್‌ಪೆಕ್ಟರ್ ಕಿರುಕುಳದಿಂದಾಗಿ ಠಾಣೆಯ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದಿರುವ ಪತ್ರ ವೈರಲ್ ಆಗಿದ್ದು, ಇಲಾಖೆಯಲ್ಲಿನ ಭ್ರಷ್ಟಾಚಾರ ಮತ್ತು ಪೋಸ್ಟಿಂಗ್‌ಗಾಗಿ ಲಂಚದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆಡಳಿತಾರೂಢ ಬಿಜೆಪಿ ಸರ್ಕಾರದತ್ತ ಬೆರಳು ತೋರಿಸಲಾಗುತ್ತಿದೆ.
ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳ್ಳತನಕ್ಕೆ ಎಫ್‌ಐಆರ್ ದಾಖಲಿಸಲು 15 ಸಾವಿರ ಹಾಗೂ ಲ್ಯಾಪ್‌ಟಾಪ್ ಕಳ್ಳತನಕ್ಕೆ 5 ಸಾವಿರ ರೂಪಾಯಿ ವಸೂಲಿ ಮಾಡಲಾಗಿದೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ. ಪತ್ರದಲ್ಲಿ ವಿವಿಧ ಬಾರ್‌ಗಳು, ಮಾಲ್‌ಗಳು ಮತ್ತು ಪಬ್‌ಗಳಿಗೆ ನಿಗದಿ ಪಡಿಸಿರುವ ಲಂಚದ ಮೊತ್ತದ ವಿವರಗಳನ್ನು ತಿಳಿಸಲಾಗಿದೆ. .
ಸುಳ್ಳಿನ ಕಳ್ಳತನ ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾದ ಯುವಕನ ಆತ್ಮಹತ್ಯೆ ಪ್ರಕರಣದ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆತನಿಂದ 3 ಲಕ್ಷ ರೂ.ಗಳಿಗೆ ಬೇಡಿಕೆ ಇಡಲಾಗಿತ್ತು. ಆತ್ಮಹತ್ಯೆಯ ನಂತರ, ಪ್ರಕರಣವನ್ನು ಮುಚ್ಚಿಹಾಕಲು ಇನ್ಸ್‌ಪೆಕ್ಟರ್ 15 ಲಕ್ಷ ರೂ. ಖರ್ಚು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.ಹೀಗಾಗಿ, ಸಾಮೂಹಿಕವಾಗಿ ಬೇರೆ ಠಾಣೆಗೆ ವರ್ಗಾವಣೆ ಮಾಡುವಂತೆ ಸಂತ್ರಸ್ತ ಪೊಲೀಸ್ ಸಿಬ್ಬಂದಿ ರಾಷ್ಟ್ರಪತಿಗೆ ಮನವಿ ಮಾಡಿದ್ದಾರೆ.
ಶಾಲೆಯಲ್ಲಿ ಗುಂಡಿನ ದಾಳಿ: 3 ಮಕ್ಕಳು, 3 ಸಿಬ್ಬಂದಿಯನ್ನು ಬಲಿ ಪಡೆದ ಪಾತಕಿ
ಮಾಡಾಳ್ ಬಂಧನ ; ನಂಗೆ ಎದೆ ನೋವು ಎಂದು ಹೈಡ್ರಾಮ!