newsics.com
ಕರ್ನೂಲು: ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಮಹಿಳೆಯೊಬ್ಬರು ತಮ್ಮ ಪತಿಯ ಮೃತದೇಹವನ್ನು ಏಕಾಂಗಿಯಾಗಿ ಮನೆಯಲ್ಲಿಯೇ ದಹನ ಮಾಡಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಪಾತಿಕೊಂಡ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಲಿತಮ್ಮ ಎಂಬವರ ಪತಿ ಹರಿಕೃಷ್ಣ ಪ್ರಸಾದ್ (63) ಅವರು ದೀರ್ಘಕಾಲದಿಂದ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಈಚೆಗೆ ಮೃತಪಟ್ಟರು.
ಮನೆಯಲ್ಲಿದ್ದ ರಟ್ಟಿನ ಪೆಟ್ಟಿಗೆಗಳು ಮತ್ತು ಬಟ್ಟೆಗಳನ್ನು ಬಳಸಿ ಲಲಿತಮ್ಮ ಅವರು ತಮ್ಮ ಪತಿಯ ಮೃತದೇಹವನ್ನು ಸೋಮವಾರ ತಾವೇ ದಹಿಸಿದ್ದಾರೆ. ಜತೆಗೆ, ಅಂತಿಮ ಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸಲೂ ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಒಬ್ಬ ಮಗ ಮೆಡಿಕವರ್ ಆಸ್ಪತ್ರೆಯಲ್ಲಿ ಉದ್ಯೋಗದಲ್ಲಿದ್ದಾರೆ. ಮತ್ತೊಬ್ಬ ಮಗ ಕೆನಡಾದಲ್ಲಿ ನೆಲೆಸಿದ್ದಾರೆ.ಆಸ್ತಿ ಕಲಹದ ಕಾರಣ ಮಕ್ಕಳಿಬ್ಬರೂ ತಂದೆ, ತಾಯಿಯನ್ನು ದೂರವಿಟ್ಟಿದ್ದರು. ಲಲಿತಮ್ಮ ಅವರು ಸಮಾಜದಿಂದಲೂ ದೂರವಿದ್ದರು ಹಾಗಾಗಿ ಅವರ ಸಹಾಯಕ್ಕೆ ಯಾರೂ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಎಲ್ಲಾ ಕೋನಗಳಲ್ಲೂ ತನಿಖೆ ನಡೆಸಿದ ಬಳಿಕ ಯಾವುದೇ ದುಷ್ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿಲ್ಲ ಎಂದರು.