newsics.com
ಕುವೈತ್: ಕೊರೋನಾದಿಂದ ಜಗತ್ತಿನ ಬಹುತೇಕರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಕೋಟ್ಯಂತರ ಜನ ಬಡತನದ ದವಡೆಗೆ ನೂಕಲ್ಪಟ್ಟದ್ದಾರೆ. ಇಂತಹ ಸಂದಿಗ್ಧ ಸಮಯದಲ್ಲಿ ಬ್ಯಾಂಕ್ ಖಾತೆಗೆ ಒಂದೂವರೆ ಕೋಟಿ ರೂಪಾಯಿ ಸಂದಾಯವಾಗಿದೆ.
ಆದರೆ ಆಕಸ್ಮಿಕವಾಗಿ ಖಾತೆಗೆ ಬಂದ ಅಷ್ಟೂ ಹಣವನ್ನು ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಈ ಘಟನೆ ನಡೆದದ್ದು ದೂರದ ಕುವೈತ್ನಲ್ಲಾದರೂ, ಹೀಗೆ ಪ್ರಾಮಾಣಿಕತೆ ಮೆರೆದು ಪ್ರಶಂಸೆಗೆ ಪಾತ್ರರಾದವರು ಕನ್ನಡಿಗ ಎಂಬುದು ವಿಶೇಷ.
ಬೆಂಗಳೂರು ಮೂಲದ ಸುನಿಲ್ ಡೊಮೆನಿಕ್ ಡಿಸೋಜಾ ಈ ಪ್ರಶಂಸೆಗೆ ಪಾತ್ರರಾದ ಕನ್ನಡಿಗ. ಕುವೈತ್ನ ಬಿಟಿಸಿ ಎಂಬ ಖಾಸಗಿ ಕಂಪನಿಯಲ್ಲಿ ಎ.ಸಿ. ತಂತ್ರಜ್ಞರಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಸುನಿಲ್, ಇತ್ತೀಚಿಗೆ ಆ ಕೆಲಸ ತೊರೆದು ಬೆಂಗಳೂರಿಗೆ ವಾಪಸ್ಸಾಗಲು ನಿರ್ಧರಿಸಿದ್ದರು.
ಕಂಪನಿ ಅವರನ್ನು ಗೌರವಯುತವಾಗಿ ಬೀಳ್ಕೊಟ್ಟಿತು. ಅವರಿಗೆ ಬರಬೇಕಿದ್ದ ಸ್ಯಾಲರಿ, ಗ್ರಾಚ್ಯುಟಿ ಹಾಗೂ ಇತರ ಹಣಕಾಸಿನ ವ್ಯವಹಾರ ಪೂರ್ಣಗೊಳಿಸಿತು. ಈ ಸಂಬಂಧ ಅವರ ಖಾತೆಗೆ ಕಂಪನಿಯಿಂದ ಹಣ ವರ್ಗಾಯಿಸಲ್ಪಟ್ಟಿತು.
ಅದು ಒಂದೆರಡು ರೂಪಾಯಿ ಅಲ್ಲ. 62,859 ಕುವೈತ್ ದಿನಾರ್. ಅಂದರೆ ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿ.
ತಕ್ಷಣ ಸುನಿಲ್ ತಮ್ಮ ಕಂಪನಿಗೆ ಈ ವಿಚಾರ ತಿಳಿಸಿದ್ದಾರೆ. ಬಳಿಕ ಬ್ಯಾಂಕ್ನಲ್ಲಿ ಪರಿಶೀಲಿಸಿದಾಗ ಟೆಕ್ನಿಕಲ್ ಪ್ರಾಬ್ಲಮ್ನಿಂದ ಹೀಗಾಗಿರೋದು ಪತ್ತೆಯಾಗಿದೆ. ಕೂಡಲೇ ಅವರಿಗೆ ಸಿಗಬೇಕಾಗಿದ್ದಷ್ಟು ಹಣ ಇರಿಸಿ, ಉಳಿದ ಮೊತ್ತವನ್ನು ಹಿಂಪಡೆಯಲಾಯಿತು.
ಸುನಿಲ್ ಡಿಸೋಜಾ ಅವರ ಪ್ರಾಮಾಣಿಕತೆಯನ್ನು ಕುವೈತ್ನ ಕಂಪನಿ ಕೊಂಡಾಡಿದೆ. 1.5 ಕೋಟಿ ಹಿಂತಿರುಗಿಸಿದ್ದಕ್ಕೆ ಅವರನ್ನು ಅಭಿನಂದಿಸಿದೆ. ಜತೆಗೆ 250 ದಿನಾರ್ ಅಂದರೆ ಸುಮಾರು 61 ಸಾವಿರ ರೂಪಾಯಿ ಹಾಗೂ ವಿಶೇಷ ಪ್ರಶಂಸಾ ಪತ್ರ ನೀಡಿ ಗೌರವಿಸಿದೆ.
ಒಂದೇ ನಿಮಿಷದಲ್ಲಿ 109 ಪುಶ್ ಅಪ್: ಗಿನ್ನೆಸ್ ವಿಶ್ವ ದಾಖಲೆ ಬರೆದ ನಿರಂಜೋಯ್ ಸಿಂಗ್