2008ರ ಮುಂಬೈ ದಾಳಿಯ ಸಂಚುಕೋರ ಹಾಗೂ ಜಾಗತಿಕ ಭಯೋತ್ಪಾದಕ ಹಫೀಜ್ ಸಯೀದ್ ಗೆ ಜೈಲು ಶಿಕ್ಷೆ ವಿಧಿಸಿರುವ ಪಾಕ್ ಕ್ರಮವನ್ನು ಅಮೆರಿಕ ಸ್ವಾಗತಿಸಿದೆ. ಇದು ಜಾಗತಿಕ ಭಯೋತ್ಪಾದನೆಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಪಾಕಿಸ್ತಾನದ ಬದ್ದತೆಯತ್ತ ಕ್ರಮ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಅಭಿಪ್ರಾಯಪಟ್ಟಿದೆ. ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ನೀಡಿದ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಉಗ್ರ ಹಫೀಜ್ ಸಯೀದ್ ಮತ್ತು ಆತನ ಸಹಚರನಿಗೆ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಆದರೆ ಇದು ಕಣ್ಣೊರೆಸುವ ತಂತ್ರವಾಗಿದೆ. ಭಾನುವಾರ ಪ್ಯಾರಿಸ್ ನಲ್ಲಿ ಭಯೋತ್ಪಾದನಾ ನಿಗ್ರಹ ಮಾತುಕತೆ ಆರಂಭವಾಗಲಿದ್ದು, ತನ್ನ ಮುಖ ಉಳಿಸಲು ಪಾಕ್ ಈ ತೋರಿಕೆಯ ಕ್ರಮ ಕೈಗೊಂಡಿದೆ ಎಂದು ಕೂಡ ವಿಶ್ಲೇಷಿಸಲಾಗಿದೆ.